ಬಾಗಲಕೋಟೆ: ನವನಗರದ ಯೂನಿಟ್-೧ ಮೂಲೆ ನಿವೇಶನ ಹರಾಜು ಆರಂಭಗೊಂಡಿದ್ದು, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಬಿಡ್‌ದಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆದಿದೆ.
ನವನಗರದ ಬಿಟಿಡಿಎ ಸಭಾಭವನದಲ್ಲಿ ಬೆಳಗ್ಗೆ ಮೂಲೆ ನಿವೇಶನ ಹರಾಜಿಗೆ ಚಾಲನೆ ದೊರೆಯಿತು. ಆದರೇ ಕೂಡಲ ಆಸನ ವ್ಯವಸ್ಥೆ ಇಲ್ಲ. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಹರಾಜಿನ ಕೋಪನ್ ನೀಡಿದ್ದರು. ಆಸನ ವ್ಯವಸ್ಥೆ ಮಾಡಿದ್ದು ಕೇವಲ ೫೦೦ ಮಾತ್ರ. ಇದರಿಂದ ಆಕ್ರೋಶಗೊಂಡ ಬಿಡ್‌ದಾರರು ಬಿಟಿಡಿಎ ವಿರುದ್ಧ ಕಿಡಿಕಾರಿ ಹರಾಜು ಪ್ರಕ್ರಿಯೆ ಸ್ಥಗೀತಗೊಳಿಸುವಂತೆ ಆಗ್ರಹಿಸಿದರು. ಎರಡು ಗಂಟೆಗೂ ಹೆಚ್ಚು ಕಾಲ ಹರಾಜು ಪ್ರಕ್ರಿಯೆಗೆ ಬ್ರೇಕ್ ಬಿದ್ದಿತು. ನಂತರ ಬಿಟಿಡಿಎ ಪುನರ್ ವಸತಿ ಅಧಿಕಾರಿ ಗುರುಸಿದ್ದಯ್ಯ ಹಿರೇಮಠ, ಬುಡಾ ಆಯುಕ್ತ ಗಣಪತಿ ಪಾಟೀಲ ಬಿಡ್‌ದಾರರನ್ನು ಸಮಾಧನಪಡಿಸಿದರು. ಉತ್ತಮ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಬಿಡ್ ಪ್ರಕ್ರಿಯೆ ಆರಂಭಗೊಂಡಿತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಡ್‌ದಾರ ನಗರಸಭೆ ಮಾಜಿ ಸದಸ್ಯ ಹನುಮಂತ ರಾಕುಂಪಿ, ಮೂಲೆ ನಿವೇಶನದಿಂದ ಕೋಟ್ಯಂತರ ರೂ. ವಹಿವಾಟು ಮಾಡುವ ಬಿಟಿಡಿಎ ಹರಾಜಿನಲ್ಲಿ ಭಾಗವಹಿಸುವ ಬಿಡ್‌ದಾರರಿಗೆ ಸಮರ್ಪಕ ಆಸನ ವ್ಯವಸ್ಥೆ ಕಲ್ಲಿಸಿಲ್ಲ. ಸಭಾಂಗಣವೇ ಕಿಕ್ಕೀರಿದು ತುಂಬಿತ್ತು. ಬಿಡ್ ಕೂಗುವವರ ಧ್ವನಿ ವೇದಿಕೆ ಮೇಲೆ ಕೇಳುತ್ತಿರಲಿಲ್ಲ. ಅಂದಾಜು ೩ ಸಾವಿರ ಕೋಪನ್ ಕೊಟ್ಟಿದ್ದಾರೆ. ೪೦೦ ಕುರ್ಚಿ ಕೂಡಾ ಇರಲಿಲ್ಲ. ಅಲ್ಲಿನ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಮಂಗಳವಾರ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.