ಜಿಲ್ಲೆ

ಕಾರ್ಖಾನೆಗಳ ಸಾಹುಕಾರರ ಮುಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರ; ಬಿ.ವೈ.ವಿಜಯೇಂದ್ರ ವಾಗ್ದಾಳಿ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ನ್ಯಾಯಯುತ ಬೆಲೆಗಾಗಿ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಧರಣಿಗೆ ಕಾಂಗ್ರೆಸ್ ಸರ್ಕಾರ ಸ್ಪಂದಿಸುತ್ತಿಲ್ಲ. ಸಕ್ಕರೆ ಕಾರ್ಖಾನೆಗಳ ಸಾಹುಕರರ ಹಿತ ಮುಖ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರಾಕಾರ‌ ಮಳೆ,‌ನದಿಗಳ ಪ್ರವಾಹದಿಂದ ಉಂಟಾದ ಬೆಳೆಹಾನಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರಕ್ಕೆ ಬೆಳೆಹಾನಿ ಕೊಡಲು ಹಣ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಲೆ ಕೊಡುತ್ತಿಲ್ಲ. ಬದಲಾಗಿ ಕಾರ್ಖಾನೆಗಳ ಮಾಲೀಕರ ಅಧೀನದಲ್ಲಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಕಬ್ಬಿನ ಬೆಂಬಲ ಬೆಲೆ‌ ಘೋಷಣೆ ಮಾಡಬೇಕೆಂದು ರೈತರ ಹೋರಾಟದಲ್ಲಿ ಭಾಗಿಯಾಗಲು ನಾನು ಯಡಿಯೂರಪ್ಪ ಮಗನಾಗಿ ಬಂದಿದ್ದೇನೆ. ಯಾರು ಯಾರು ಕಾರ್ಖಾನೆಗಳಿವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಕ್ಕರೆ ಕಾರ್ಖಾನೆ ಸಾಹುಕಾರ್ ಗಳ ಜೊತೆಗೆ ಅಧಿಕಾರಿಗಳು ಸೇರಿ ಚರ್ಚೆ ಮಾಡಿ ಸಮಸ್ಯೆ ಬಗೆ ಹರಿಸಬೇಕು ಎಂದರು.

ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ಕೆಲ ದಿನಗಳಿಂದ ಕಬ್ಬು ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ಅವರ ನ್ಯಾಯಯುತವಾಗಿರುವ ಬೇಡಿಕೆಗಳನ್ನು ರಾಜ್ಯ ಸರಕಾರ ಮುಂದಾಳತ್ವ ವಹಿಸಿ ಈಡೇರಿಸುವ ಆಗ್ರಹ ಇದೆ. ರಾಜ್ಯ ಸರಕಾರ ಸ್ಪಂದನೆ ಮಾಡದಿದ್ದಾಗ ವಿರೋಧ ಪಕ್ಷವಾಗಿ ಬೆಂಬಲ ನೀಡಬೇಕಿದೆ‌. ಹಾಗಾಗಿ ನಾನು ಸಹ ಎಲ್ಲಾ ಪಕ್ಷದ ಮುಖಂಡರ ಜೊತೆಗೆ ಚರ್ಚೆ ಮಾಡಿ ರೈತರ ಪ್ರತಿಭಟನೆಗೆ ಬೆಂಬಲ ಕೊಡಲು ನಾನು ಬಂದಿದ್ದೇನೆ ಎಂದರು.

ರಾಜ್ಯದ ಮುಖ್ಯಮಂತ್ರಿ ಕಳೆದ 2014ರಲ್ಲಿ ಅಧಿವೇಶನ ನಡೆಯುವಾಗ. ರೈತ ವಿಠ್ಠಲ್ ಅರಬಾವಿಯವರು ಕಬ್ಬಿನ ದರದ ವಿಚಾರದಲ್ಲಿ ಪ್ರಾಣ ಕಳೆದುಕೊಂಡರು. ಆಗ ಯಡಿಯೂರಪ್ಪ ಅವರು ಹೋರಾಟ ಮಾಡಿ ಅಂದಿನ ಸಿಎಂಗೆ ಒತ್ತಾಯಿಸಿ ಯಶಸ್ವಿಯಾಗಿದ್ದರು.

ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಅತೀವೃಷ್ಟಿ ಸಂದರ್ಭದಲ್ಲಿ ಸಹ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾನು ಪ್ರವಾಸ ಮಾಡಿದೆ. ಭೀಕರ ಮಳೆಯಿಂದ ತೊಂದರೆಗಿಡಾದಾಗ ಉಸ್ತುವಾರಿ ಸಚಿವರು, ಕಂದಾಯ ಸಚಿವರು, ಕೃಷಿ ಸಚಿವರು ಉತ್ತರ ಕರ್ನಾಟಕ ಪ್ರವಾಸ ಮಾಡಲಿಲ್ಲ. ರೈತರು ಇಂದು ಮತ್ತೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಕಿಂಚಿತ್ತೂ ತಲೆ ಕೆಡಸಿಕೊಳ್ಳದೇ ಇದ್ದಾಗ ನಾವು ಹೋರಾಟಕ್ಕೆ ಬಂದಿದ್ದೇವೆ ಎಂದರು.