ಜಿಲ್ಲೆ

ಬಿಎಸ್‌ವೈ ಬದಲಾವಣೆ ಸತ್ಯಕ್ಕೆ ದೂರ

Belagavi

ಚಿಕ್ಕೋಡಿ: ರಾಜಕೀಯ ಜೀವನ ಮುಗಿಯುವವರೆಗೆ ನಾನು ಬಿಜೆಪಿಯಲ್ಲೇ ಇರುತ್ತೇನೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಿಸಲಾಗುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದದ್ದು. ಬಿಎಸ್‌ವೈ ಪಕ್ಷಕ್ಕಾಗಿ ಯುವಕರಂತೆ ದುಡಿಯುತ್ತಿದ್ದಾರೆ. ಅವರನ್ನು ಬದಲಾಯಿಸುವ ಪ್ರಶ್ನೆಯಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಪಟ್ಟಣದ ಸಂಘದ ಕಾರ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿ ಬಳಿಕ ಸುದ್ದಿಗಾರರಗೊಂದಿಗೆ ಅವರು ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಆ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ ಎಂದು ನುಣುಚಿಕೊಂಡರು. ಸಂಘ ಪರಿವಾರದಲ್ಲಿ ನನಗೆ ಸಿಗುತ್ತಿರುವ ಗೌರವ, ಆಶೀರ್ವಾದವನ್ನು ವೈರಿಗಳಿಗೆ ನೋಡಲಾಗುತ್ತಿಲ್ಲ. ಹೀಗಾಗಿ ನಾನು ಪಕ್ಷ ಬಿಡುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು.

ಮಂತ್ರಿಗಿಂತ ಹೆಚ್ಚು ಪವರ್: ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಎರಡು ಬಣ ಇರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡ ರಮೇಶ ಜಾರಕಿಹೊಳಿ, ಮುಂಬರುವ ಡಿಸಿಸಿ ಬ್ಯಾಂಕ್ ಚುನಾವಣೆ ಯಲ್ಲಿ ಕತ್ತಿ ಸಹೋದರರು ಹಾಗೂ ಬಾಲಚಂದ್ರ ಜಾರಕಿಹೊಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದರು. ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ನೀಡದ ವಿಚಾರದ ಕುರಿತು ಮಾತನಾಡಿ, ನಾನು ಶಾಸಕನಾದ 20 ವರ್ಷಗಳ ಬಳಿಕ ಮಂತ್ರಿ ಆಗಿದ್ದೇನೆ. ಅದೃಷ್ಟವೆಂಬುದು ಹಣೆ ಬರಹದಲ್ಲಿರಬೇಕು. ಉಮೇಶ ಕತ್ತಿ ಹಿರಿಯರಿದ್ದು, ಅವರಿಗೆ ಮಂತ್ರಿಗಿಂತ ಹೆಚ್ಚು ಪವರ್ ಇದೆ ಎಂದು ಟಾಂಗ್ ನೀಡಿದರು.