ಜಿಲ್ಲೆ

26ರಂದು ಸಂಗಮೇಶ್ವರ ರಥೋತ್ಸವ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಐದು ದಿನಗಳ ಕಾಲ ಸಂಗಮೇಶ್ವರ ಜಾತ್ರೆ ನಡೆಯಲಿದೆ. ಆ.26ರಂದು ಸಂಜೆ 4ಕ್ಕೆ ಮಹಾರಥೋತ್ಸವ ನೆರವೇರಲಿದೆ ಎಂದು ಜಾತ್ರಾ ಸಮಿತಿಯ ಹಿರಿಯರು ತಿಳಿಸಿದ್ದಾರೆ.

ಈ ಬಾರಿ ಗ್ರಾಮದ ಯುವಕರು ಹಣ ಕೂಡಿಸಿ, ರಥದ ಕಳಸದ ಮೇಲೆ ಬೆಳ್ಳಿಯ ನವಿಲು ಮಾಡಿಸಿದ್ದು ವಿಶೇಷ ಆಕರ್ಷಣೆಯಾಗಿದೆ.

ಭಾನುವಾರ ಸಂಜೆ ರಥದ ಕಳಸಾರೋಹಣ ಮಾಡಲಾಗುವುದು. ನಿರಂತರ ಭಜನೆ ಕಾರ್ಯಕ್ರಮ ಜರುಗಲಿದೆ. ರಾತ್ರಿ ಮಹಾಪ್ರಸಾದ ವ್ಯವಸ್ಥೆ ಇದೆ. ಸೋಮವಾರ ನಸುಕಿನ 4ರಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಇಡೀ ದಿನ ದರ್ಶನ ಪಡೆದು, ನೈವೇದ್ಯ ಅರ್ಪಿಸಲಿದ್ದಾರೆ. ಸಂಜೆ ಹಾರೂಗೊಪ್ಪ ಹಾಗೂ ಚಚಡಿ ಗ್ರಾಮದ ಗುರು– ಹಿರಿಯರ ಸಮ್ಮುಖದಲ್ಲಿ ರಥ ಎಳೆಯಲಾಗುವುದು.

ಜಾತ್ರೆಯ ಅಂಗವಾಗಿ ಆ. 26ರಂದು ರಾತ್ರಿ 10ಕ್ಕೆ ಸಂಗಮೇಶ್ವರ ಯುವ ನಾಟ್ಯ ಸಂಘದಿಂದ ‘ಭಂಡ ದರೋಡರಿಗೆ ಗಂಡ ಗರುಡ’ ನಾಟಕ ಪ್ರದರ್ಶನ ನಡೆಯಲಿದೆ. ಆ.27ರಂದು ಹಾಗೂ 28ರಂದು ರಾಜ್ಯಮಟ್ಟದ ಜಂಗೀ ನಿಕಾಲಿ ಕುಸ್ತಿಗಳು ನಡೆಯಲಿವೆ.

ಆ.27ರಂದು ಬೆಳಿಗ್ಗೆ 9ಕ್ಕೆ ಪಾಂಡುರಂಗ ದೇವಸ್ಥಾನದಲ್ಲಿ ಫ್ರೆಂಡ್ಸ್‌ ಕ್ಲಬ್‌ನಿಂದ ರಾಜ್ಯಮಟ್ಟದ ಲುಡೋ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನವಾಗಿ ಒಂದು ಬೈಕ್, ದ್ವಿತೀಯ ಬಹುಮಾನ ₹30 ಸಾವಿರ, ತೃತೀಯ ಬಹುಮಾನ ₹15 ಸಾವಿರ ನೀಡಲಾಗುವುದು. ಬಹುಮಾನದ ಹಣವನ್ನು ಗ್ರಾಮದ ಯುವಜನರೇ ನೀಡಲಿದ್ದಾರೆ. ಅದೇ ದಿನ ಪಾಂಡುರಂಗ ವಿಠ್ಠಲ ಕಮಿಟಿಯಿಂದ ಲಿಂಬು– ಚಮಚ ಸ್ಪರ್ಧೆ ಎಸ್‌ವಿಜಿಡಿ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿದೆ. ಭಗತ್‌ಸಿಂಗ್‌ ಗೆಳೆಯರ ಬಳಗ ಹಾಗೂ ಮಹರ್ಷಿ ವಾಲ್ಮೀಕಿ ಗೆಳೆಯರ ಬಳಗದಿಂದ ಕ್ರಿಕೆಟ್‌ ಪಂದ್ಯಗಳನ್ನೂ ಆಯೋಜಿಸಲಾಗಿದೆ.