ಜಿಲ್ಲೆ

ಪರಿಶಿಷ್ಟ ಸಮುದಾಯಕ್ಕೆ ಸಿಗದ ಸಿಎಂ ಸ್ಥಾನ: ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಬೇಸರ

ಕೆ.ಎನ್.ರಾಘವೇಂದ್ರ

ಮಂಡ್ಯ: ಕರ್ನಾಟಕದಲ್ಲಿ ಸುಮಾರು ಎರಡು ಕೋಟಿಗೂ ಹೆಚ್ಚು ಪರಿಶಿಷ್ಟ ಜನರಿದ್ದರೂ ಮುಖ್ಯಮಂತ್ರಿ ಆಗಲು ಇದುವರೆಗೂ ಸಾಧ್ಯವಾಗಿಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಬಿಎಸ್ಪಿ ಜಿಲ್ಲಾ ಮಟ್ಟದ ಪದಾಧಿಕಾರಿ ಹಾಗೂ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಪರಿಶಿಷ್ಟರಿಗಿಂತ ಕಡಿಮೆ ಜನಸಂಖ್ಯೆ ಬೇರೆ ಸಮುದಾಯದವರು ಸಿಎಂ ಆಗಿದ್ದಾರೆ. ಉತ್ತರ ಪ್ರದೇಶದಲ್ಲಿ ಬಹುಜನ ಚಳವಳಿ ಪರಿಶಿಷ್ಟ ಸಮುದಾಯದ ಎಲ್ಲ ಪಂಗಡ, ಉಪ ಪಂಗಡಗಳನ್ನು ಒಗ್ಗೂಡಿಸಿ ನಾಲ್ಕು ಬಾರಿ ಮುಖ್ಯಮಂತ್ರಿ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಯಿತು ಎಂದು ಹೇಳಿದರು.

ಈಗಲೂ ರಾಜ್ಯದಲ್ಲಿ ಮೇಲ್ವರ್ಗದ ಅಧಿಕಾರಿಗಳು ಆಯಕಟ್ಟಿನ ಸ್ಥಳದಲ್ಲಿದ್ದಾರೆ. ಸರ್ಕಾರದ 36 ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರು, 31 ಜಿಲ್ಲೆಗಳ ಜಿಲ್ಲಾಧಿಕಾರಿಯಲ್ಲಿ ಇಬ್ಬರು, 31 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಲ್ಲಿ ಒಬ್ಬರು ಮಾತ್ರ ಪರಿಶಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸರ್ಕಾರ ಅಧಿಕಾರಿಗಳ ವಲಯದಲ್ಲೂ ಜಾತಿ ನೋಡುತ್ತಿದೆ. ಇನ್ನು ಸಂಪುಟದಲ್ಲಿ 9 ಸಚಿವರು ಇದ್ದಾರೆ. ಇಬ್ಬರಿಗೆ ಪ್ರಬಲ ಖಾತೆ ಇದೆ, ಇನ್ನುಳಿದ ಸಚಿವರಿಗೆ ಹೇಳಿಕೊಳ್ಳುವಂತ ಖಾತೆ ಕೊಟ್ಟಿಲ್ಲ. ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಗ್ಯಾರಂಟಿ ಯೋಜನೆಗೆ 11,000 ಕೋಟಿ ರೂ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ಆದರೂ ಸಮುದಾಯದ ಶಾಸಕರು ಬಾಯಿ ಮುಚ್ಚಿಕೊಂಡಿದ್ದಾರೆ. ರಾಜ್ಯ ಸರ್ಕಾರಕ್ಕೆ ದಲಿತರ ಕಾಳಜಿ ಇಲ್ಲವಾಗಿದೆ ಎಂದು ಹೇಳಿದರು.

ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗರು ಶ್ರೀಮಂತರಿಂದ ಹಣ ತಂದು ಚುನಾವಣೆಯಲ್ಲಿ ಹಾಕುತ್ತಾರೆ. 2 ರಿಂದ 3 ಸಾವಿರ ರೂ. ನೀಡಿ ಮತ ಕೇಳುತ್ತಾರೆ. ಬಿಎಸ್ಪಿಯವರು ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಮಾತನಾಡಿ ಮತದಾರರಿಂದಲೇ ಒಂದು ರೂ.ಪಡೆದು ಮತ ಕೇಳಿ ಸ್ವಾಭಿಮಾನ ಹೆಚ್ಚಿಸುವುದನ್ನು ಮರೆಯತ್ತಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಚುನಾವಣೆ ಎದುರಿಸಲಾಗುತ್ತಿದೆ ಎಂದು ವಿವರಿಸಿದರು.

ಪಕ್ಷದ ರಾಜ್ಯ ಸಂಯೋಜಕ ಎಂ.ಕೃಷ್ಣಮೂರ್ತಿ, ಉಪಾಧ್ಯಕ್ಷ ಗಂಗಾಧರ್ ಬಹುಜನ್, ಪ್ರಧಾನ ಕಾರ್ಯದರ್ಶಿಗಳಾದ ಮುನಿಯಪ್ಪ, ಹ.ರಾ.ಮಹೇಶ್, ಜಿಲ್ಲಾ ಉಸ್ತುವಾರಿ ಎಂ.ವೆಂಕಟೇಶ್, ಜಿಲ್ಲಾಧ್ಯಕ್ಷ ಎಸ್.ಶಿವಶಂಕರ್, ಸಂಯೋಜಕ ಚಲುವರಾಜ್, ಸೋದರತ್ವ ಸಮಿತಿ ಜಿಲ್ಲಾಧ್ಯಕ್ಷ ರವಿಗೌಡ, ಕಾರ್ಯದರ್ಶಿ ಆನಂದ, ವೀರಭದ್ರಯ್ಯ, ಲೋಕೇಶ್ ಇತರರಿದ್ದರು.