ಜಿಲ್ಲೆ

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅನ್ಯಾಯ: ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ವಾಗ್ದಾಳಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಅಹಿಂದ ಹೆಸರಿನಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯದ ಮತವನ್ನು ಪಡೆದು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ, ಎಸ್ಸಿ ಮತ್ತು ಎಸ್ಟಿ ನೌಕರರಿಗೆ ನೇಮಕಾತಿ ಮತ್ತು ಬಡ್ತಿ ವಿಚಾರದಲ್ಲಿ ದೊಡ್ಡಮಟ್ಟದ ಅನ್ಯಾಯ ಮಾಡುತ್ತಿದೆ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಆರೋಪಿಸಿದರು.

ಮತ ಮತ್ತು ಅಧಿಕಾರಕ್ಕಾಗಿ ನಾವು ದಲಿತಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಸರ್ಕಾರ ರಾಜ್ಯದ 31 ಜಿಲ್ಲೆಗಳಲ್ಲಿ ಕೇವಲ ಒಂದು ಜಿಲ್ಲೆಗೆ ಮಾತ್ರ ಎಸ್ಸಿ ಮತ್ತು ಎಸ್ಟಿ ಸಮಾಜಕ್ಕೆ ಸೇರಿದ ಜಿಲ್ಲಾಧಿಕಾರಿಯನ್ನು ನೇಮಕ ಮಾಡಿದೆ. ಬಿಜೆಪಿ ಅವಧಿಯಲ್ಲಿ 11 ಜಿಲ್ಲೆಯಲ್ಲಿ ಡಿಸಿ ಹುದ್ದೆ ನೀಡಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪದವಿ ಪೂರ್ವ ಶಿಕ್ಷಣ, ಗೃಹ, ಅರಣ್ಯ, ತೋಟಗಾರಿಕೆ, ಕೃಷಿ, ನಗರಾಭಿವೃದ್ಧಿ, ಸಾರಿಗೆ, ಡಿಪಿಎಆರ್, ಇಂಧನ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಮುಂಬಡ್ತಿಗೆ ಅರ್ಹರಾಗಿರುವ ಎಸ್ಸಿ ಮತ್ತು ಎಸ್ಪಿ ನೌಕರರಿಗೆ ಸಕಾಲದಲ್ಲಿ ಬಡ್ತಿ ನೀಡದೆ ವಂಚನೆ ಮಾಡಲಾಗುತ್ತಿದೆ ಎಂದು ಉದಾಹರಣೆ ನೀಡಿ ಆರೋಪಿಸಿದರು.

ಪದವಿ ಪೂರ್ವ ಕಾಲೇಜಿನ ಸುಮಾರು 80 ಜನ ಎಸ್ಸಿ ಮತ್ತು ಎಸ್ಟಿ ಉಪನ್ಯಾಸಕರಿಗೆ ಪ್ರಾಂಶುಪಾಲರಾಗಿ ಬಡ್ತಿ ನೀಡದೇ ಸಾಂವಿಧಾನಿಕ ಸಂಸ್ಥೆಯಾಗಿರುವ ಶಾಸಕ ನರೇಂದ್ರಸ್ವಾಮಿ ನೇತೃತ್ವದ ಸದನ ಸಮಿತಿಯ ಆದೇಶವನ್ನು ಕಡೆಗಣಿಸಿದೆ. ಈ ಎರಡು ಸಮುದಾಯಕ್ಕೆ ಅನ್ಯಾಯ ಮಾಡಲೆಂದು ಇತರರಿಗೆ ಬಡ್ತಿ ನೀಡಲಾಗಿದೆ. ಸದನ ಸಮಿತಿ ಆದೇಶವನ್ನು ಪಾಲಿಸದಿದ್ದರೆ ಸದನ ಸಮಿತಿಯನ್ನೇ ರದ್ದುಗೊಳಿಸಿ. ಇಲ್ಲವೇ ಎಸ್ಸಿ ಮತ್ತು ಎಸ್ಟಿ ಸಮುದಾಯದ ನೌಕರರ ಹಿತರಕ್ಷಣೆ ಮಾಡಲು ವಿಫಲವಾಗಿರುವ ಶಾಸಕ ನರೇಂದ್ರಸ್ವಾಮಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದ ಸಮಾಜ ಕಲ್ಯಾಣ ಇಲಾಖೆಯ ಸ್ಪಷ್ಟ ಆದೇಶವಿದ್ದರೂ ನಗರಾಭಿವೃದ್ಧಿ ಕಾರ್ಯದರ್ಶಿ ಬಡ್ತಿ ನಿಯಮವನ್ನು ಗಾಳಿಗೆ ತೂರಿ ವಂಚಿಸುತ್ತಿದ್ದಾರೆ. ಸಿದ್ದರಾಮಯ್ಯ ಆಪ್ತ ಕೆ.ಜೆ.ಜಾರ್ಜ್ ಸಚಿವರಾಗಿರುವ ಇಂಧನ ಇಲಾಖೆಯಲ್ಲಿ 160 ಜನ ಎಸ್ಸಿ ಮತ್ತು ಎಸ್ಟಿ ಸಹಾಯಕ ಇಂಜಿನಿಯರ್‌ಗಳಿಗೆ ಬಡ್ತಿ ನೀಡದೆ ವಂಚಿಸಲಾಗುತ್ತಿದೆ. ಕೃಷಿ ಇಲಾಖೆಯಲ್ಲಿ ಸುಮಾರು 50 ಎಸ್ಸಿ ಮತ್ತು ಎಸ್ಟಿ ಅಧಿಕಾರಿಗಳಿಗೆ, ಡಾ.ಜಿ.ಪರಮೇಶ್ವರ್ ಗೃಹ ಮಂತ್ರಿಯಾಗಿದ್ದರೂ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ವಿವಿಧ ವೃಂದಗಳಿಗೆ ಬಡ್ತಿ ನೀಡುವಾಗ ಅನ್ಯಾಯ ಎಸಗಲಾಗಿದೆ ಎಂದು ವಿವರಿಸಿದರು.

ಇದಲ್ಲದೆ ಎರಡೂವರೆ ವರ್ಷದಿಂದ ಎಸ್ಸಿ ಮತ್ತು ಎಸ್ಟಿ ಆಯೋಗಕ್ಕೆ ಅಧ್ಯಕ್ಷರನ್ನೇ ನೇಮಕ ಮಾಡದಿರುವುದು ಸರ್ಕಾರದ ದಲಿತ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಅಧ್ಯಕ್ಷರನ್ನು ನೇಮಕ ಮಾಡುವ ಇಚ್ಛಾಶಕ್ತಿ ಇಲ್ಲದಿದ್ದರೇ ಆಯೋಗವನ್ನು ರದ್ದು ಮಾಡಿ ಎಂದು ಸವಾಲು ಹಾಕಿದ ಅವರು, ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಹಣವನ್ನು ಗ್ಯಾರಂಟಿ ಮತ್ತು ಇತರೆ ಯೋಜನೆಗಳಿಗೆ 25 ಸಾವಿರ ರೂ ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿಕೊಂಡು ಇಡೀ ಸಮಾಜಕ್ಕೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಸರ್ಕಾರ ಈ ಅನ್ಯಾಯಗಳನ್ನು ಸರಿಪಡಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಎಸ್‌ಪಿ ಜಿಲ್ಲಾಧ್ಯಕ್ಷ ಶಿವಶಂಕರ್, ಮುಖಂಡರಾದ ನಂಜುಂಡಸ್ವಾಮಿ, ಬಸವರಾಜು, ಎಂ.ಆರ್.ವಿನಯಕುಮಾರ್ ಇದ್ದರು.