ತಿ.ನರಸೀಪುರ: ಮೈಸೂರು ವಿಭಾಗ ಮಟ್ಟದ ಜಿಲ್ಲೆಗಳಲ್ಲಿ ಜನಪರ ಹೋರಾಟ ಹಾಗೂ ಸಂವಿಧಾನದ ಆಶಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುವ ಮೂಲಕ ಬಹುಜನ ಸಮಾಜ ಪಕ್ಷದ ಸಂಘಟನೆಯನ್ನು ಬಲವಾಗಿ ಕಟ್ಟುತ್ತೇವೆ ಎಂದು ನೂತನ ರಾಜ್ಯ ಕಾರ್ಯದರ್ಶಿ ಬಿ.ಆರ್.ಪುಟ್ಟಸ್ವಾಮಿ ಹೇಳಿದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಕಬಿನಿ ಅತಿಥಿಗೃಹದಲ್ಲಿ ಕರೆಯಲಾಗಿದ್ದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪಕ್ಷದ ಸಂಘಟನೆಗೆ ಚಳವಳಿಯೇ ಮೂಲ ನೆಲೆಯಾಗಿದ್ದು, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಆಡಳಿತದ ವಿರುದ್ಧವೂ ಧ್ವನಿ ಎತ್ತುತ್ತೇವೆ ಎಂದರು.
ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರೇ ಜೀವವಾಗಿದ್ದು, ತರಬೇತಿ ಶಿಬಿರ ಅಥವಾ ಕಾರ್ಯಾಗಾರಗಳನ್ನು ಆಯೋಜಿಸಿ ಬಿಎಸ್ಪಿ ಸಂಘಟನೆಗೆ ಹುರಿದುಂಬಿಸಲಾಗುವುದು. ಮುಂಬರುವ ಜಿ.ಪಂ ಮತ್ತು ತಾ.ಪಂ ಹಾಗೂ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲೂ ಆಯ್ದ ಪ್ರಮುಖ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಕೆಲವು ಪ್ರಮಾದಗಳಿಗೆ ಜಿಲ್ಲಾಧ್ಯಕ್ಷನಾಗಿ ಹೊಣೆಯನ್ನು ಹೊರಬೇಕಾಗಿದ್ದರಿಂದ ಹಲವು ತಿಂಗಳು ದೂರವಿರಬೇಕಾಗಿತ್ತು. ರಾಜ್ಯ ಉಸ್ತುವಾರಿಗಳಾದ ರಾಜಾರಾಂ ಮತ್ತು ದಿನೇಶ್ ಗೌತಮ್ ಅವರ ಸೂಚನೆ ಮೇರೆಗೆ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಅವರು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಪಕ್ಷದಲ್ಲಿ ದುಡಿಯಲು ಅವಕಾಶ ಕಲ್ಪಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಸಂಯೋಜಕ ಬಿ.ಮಹದೇವಸ್ವಾಮಿ ಮಾತನಾಡಿದರು. ಸಭೆಯಲ್ಲಿ ಬಿಎಸ್ಪಿ ಕ್ಷೇತ್ರಾಧ್ಯಕ್ಷ ಶಿವಸ್ವಾಮಿ(ಗೋವಿಂದ), ಜಿಲ್ಲಾ ಕಾರ್ಯದರ್ಶಿ ಅಂಕನಹಳ್ಳಿ ಜಿ.ಪುಟ್ಟರಾಜು, ಟೌನ್ ಅಧ್ಯಕ್ಷ ಭಾಸ್ಕರ್, ಯುವ ಮುಖಂಡ ನಯಾಜ್, ಪ್ರಧಾನ ಕಾರ್ಯದರ್ಶಿ ಪುಟ್ಟಮರುಡಯ್ಯ, ಉಪಾಧ್ಯಕ್ಷ ಆನಂದ್ ಕೆಂಪನಪುರ, ಕಾರ್ಯದರ್ಶಿ ಶಿವಮೂರ್ತಿ, ಉಸ್ತುವಾರಿ ಕೈಯಂಬಳ್ಳಿ ಪುಟ್ಟಸ್ವಾಮಿ, ಮುಖಂಡರಾದ ಕೆಂಪನಪುರ ರವಿ ಹಾಗೂ ಕೆಬ್ಬೆಹುಂಡಿ ಬಸವರಾಜು ಇದ್ದರು.