ಬೇಲೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟ ಲಕ್ಷಾಂತರ ಕೋಟಿ ಹಣವನ್ನು ಆ ಜನಾಂಗದ ಪ್ರಗತಿಗೆ ಬಳಸದಿರುವ ಸರ್ಕಾರದ ನೀತಿಯನ್ನು ಖಂಡಿಸಿ ಬಿಎಸ್‌ಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಅಂಬೇಡ್ಕರ್ ಭವನದಿಂದ ಮೆರವಣಿಗೆ ಹೊರಟು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ತಹಸೀಲ್ದಾರ್ ಎಂ.ಮಮತಾ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬಿಎಸ್‌ಪಿ ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ವರ್ಗ, ಹಿಂದುಳಿದವರ ಹಾಗೂ ಸಂವಿಧಾನದ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎಸ್ಸಿ,ಎಸ್‌ಪಿ-ಟಿಎಸ್‌ಪಿ ಹಣವನ್ನು ಲೂಟಿ ಮಾಡುವ ಮೂಲಕ ದಲಿತ ಮತ್ತು ಸಂವಿಧಾನದ ವಿರೋಧಿ ಆಡಳಿತ ನಡೆಸುತ್ತಿದೆ. ಏಳಿಗೆಗೆ ಶ್ರಮಿಸದೆ ಕೇವಲ ಮತಬ್ಯಾಂಕ್‌ಗಾಗಿ ದಲಿತರನ್ನು ಬಳಕೆಮಾಡಿಕೊಳ್ಳಲಾಗುತ್ತಿದೆ.
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ.ಗಳನ್ನು ಸರ್ಕಾರ ಹಗಲು ದರೋಡೆ ಮಾಡಿದೆ. ಆದರೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತ್ರ ಹಗರಣಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ. ಆರ್ಥಿಕ ಇಲಾಖೆ ಮುಖ್ಯಮಂತ್ರಿಗಳ ಹತ್ತಿರವೇ ಇದೆ. ಅವರ ಗಮನಕ್ಕೆ ಬಾರದೆ ಹೇಗೆ ಹಗರಣವಾಗಿದೆ ಎಂದು ಪ್ರಶ್ನಿಸಿದರು.
ಮುಡಾ ಹಗರಣದ ಸಂಬಂಧ ವಿರೋಧ ಪಕ್ಷಗಳಿಗೆ ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡದೆ, ವಿರೋಧ ಪಕ್ಷದವರ ವಿರುದ್ಧ ನಿಮ್ಮ 21ಹಗರಣಗಳನ್ನು ಹೊರ ಹಾಕುತ್ತೇವೆ ಎಂದು ಹೇಳುವ ಮೂಲಕ ಪ್ರಕರಣದಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿರುವುದರಿಂದ ರಾಜ್ಯಪಾಲರು ಇದನ್ನು ಗಮನಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷ ಅತ್ನಿ ಹರೀಶ್ ಮಾತನಾಡಿ, ಚುನಾವಣೆ ಪೂರ್ವದಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರ ಎನ್ನುತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಸೌಲಭ್ಯಗಳನ್ನು ನಿಲ್ಲಿಸುವ ಮೂಲಕ ದ್ರೋಹ ಬಗೆದಿದ್ದಾರೆ. ಬಡವರ, ವಿದ್ಯಾರ್ಥಿಗಳ ಹಣವನ್ನು ತಡೆಹಿಡಿಯಲಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಶಿವಮ್ಮ, ಜಿಲ್ಲಾ ಸಂಯೋಜಕ ಲಕ್ಷ್ಮಣ್ ಕೀರ್ತಿ, ಮಾಲಯ್ಯ, ಜಿಲ್ಲಾ ಉಪಾಧ್ಯಕ್ಷ ಲೋಹಿತ್, ಜಿಲ್ಲಾ ಕಾರ್ಯದರ್ಶಿ ಸಿ.ಜಿ.ಸೋಮಶೇಖರ್, ರಾಜು ಬೆಳ್ಳೊಟ್ಟೆ, ರಾಜು ಆಲೂರು, ತಾಲೂಕು ಅಧ್ಯಕ್ಷ ಪ್ರಕಾಶ್, ತಾ.ಸಂಯೋಜಕ ಉಮೇಶ್, ತಾ.ಉಪಾಧ್ಯಕ್ಷ ನಿಂಗರಾಜು, ಜಯಲಕ್ಷ್ಮೀ, ಕಾರ್ಯದರ್ಶಿ ಮಂಜುನಾಥ್ ಇತರರಿದ್ದರು.