ಜಿಲ್ಲೆ

ದತ್ತಪೀಠಕ್ಕೆ 27ರಿಂದ ಪ್ರವಾಸಿಗರಿಗೆ ನಿರ್ಬಂಧ

Chikkamagaluru

ಚಿಕ್ಕಮಗಳೂರು: ದತ್ತ ಜಯಂತಿ ಕಾರ್ಯಕ್ರಮ ಡಿ.27 ರಿಂದ 29 ರವರೆಗೆ ನಡೆಯಲಿದ್ದು, ಈ ದಿನಗಳಲ್ಲಿ ಪ್ರವಾಸಿಗರನ್ನು ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಗಾದಿ ಗೌತಮ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ದತ್ತ ಜಯಂತಿ ಆಚರಣೆ ಕುರಿತ ಸಿದ್ಧತೆ ಸಭೆಯಲ್ಲಿ ಮಾತನಾಡಿದರು.

ಕರೊನಾ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಕರೊನಾ ತಡೆ ನಿಯಮ ಪಾಲಿಸಬೇಕು. ಸಂವಹನ ವ್ಯವಸ್ಥೆಗೆ ಅನುಕೂಲವಾಗುವಂತೆ ಬಿಎಸ್​ಎನ್​ಎಲ್ ಮೊಬೈಲ್ ತರಂಗಾಂತರಗಳು ವ್ಯವಸ್ಥಿತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ದತ್ತಪೀಠದ ರಸ್ತೆ ಗುಂಡಿಗಳಿಂದ ಕೂಡಿದ್ದು, ಗುಂಡಿಗಳನ್ನು ದುರಸ್ತಿಪಡಿಸುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾತ್ಕಾಲಿಕ ಆಸ್ಪತ್ರೆ ತೆರೆದು ಅಗತ್ಯ ಔಷಧ, ಆಂಬುಲೆನ್ಸ್, ವೈದ್ಯಾಧಿಕಾರಿಗಳನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಲ್ಲಂಪುರ ರ್ಪಾಂಗ್ ಪ್ರದೇಶದಲ್ಲಿ ವಾಹನ ನಿಲುಗಡೆ, ತಾತ್ಕಾಲಿಕ ಶೌಚಗೃಹಗಳ ವ್ಯವಸ್ಥೆ, ತಾತ್ಕಾಲಿಕ ವಿದ್ಯುತ್ ಸಂಪರ್ಕ, ಭಕ್ತಾದಿಗಳ ಅಗತ್ಯಕ್ಕೆ ತಕ್ಕಂತೆ ಬಸ್ ಸೌಕರ್ಯ ಹಾಗೂ ಖಾಸಗಿ ಮಿನಿ ಬಸ್ ಸೌಕರ್ಯ ವ್ಯವಸ್ಥೆ ಮಾಡುವಂತೆ ಕೆಎಸ್​ಆರ್​ಟಿಸಿ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.