ಜಿಲ್ಲೆ

ಶಾಮನೂರು ಹೇಳಿಕೆಗೆ ಬಿಎಸ್‌ಪಿ ಖಂಡನೆ

ಚಳ್ಳಕೆರೆ: ರಾಜ್ಯ ಸರ್ಕಾರದಲ್ಲಿ ಲಿಂಗಾಯತರಿಗೆ ಘನಘೋರ ಅನ್ಯಾಯವಾಗಿದೆ ಎಂಬ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್ ಖಂಡಿಸಿದ್ದಾರೆ.

ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಆಡಳಿತ ಸರ್ಕಾರಗಳಲ್ಲಿ ಎಸ್ಸಿ, ಎಸ್ಟಿ ಜನರಿಗೆ ಅನ್ಯಾಯವಾಗಿದೆಯೇ ಹೊರತು, ಮೇಲ್ವರ್ಗದವರಿಗೆ ಅಧಿಕಾರ ಹಂಚಿಕೆಯಲ್ಲಿ ಎಳ್ಳಷ್ಟು ಮೋಸವಾಗಿಲ್ಲ. ಪ್ರಸ್ತುತ ಸರ್ಕಾರದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಅಧಿಕಾರಿಗಳ ವರ್ಗದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ವರ್ಗದವರಿದ್ದಾರೆ ಎಂದಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.42.9, ಬಿಜೆಪಿ ಶೇ.36, ಜೆಡಿಎಸ್ 13.3ರಷ್ಟು ಪ್ರಮಾಣದಲ್ಲಿ ಮತ ಪಡೆದುಕೊಂಡಿವೆ. 2018ರಲ್ಲಿ ಬಿಜೆಪಿ ಪಡೆದುಕೊಂಡ ಮತ ಪ್ರಮಾಣವನ್ನು ಈಗಲೂ ಕಾಪಾಡಿಕೊಂಡಿದೆ ಎಂದು ತಿಳಿಸಿದರು.

ಬಿಜೆಪಿ ಸಾಂಪ್ರದಾಯಿಕ ಮತಗಳು ಮತ್ತೆ ಕಮಲಕ್ಕೆ ದೊರಕಿವೆ. ಲಿಂಗಾಯತ ಮತಗಳು ಕಾಂಗ್ರೆಸ್ ಪಾಲಾಗಿವೆ ಎಂಬುವುದಕ್ಕೆ ಯಾವುದೇ ಆಧಾರವಿಲ್ಲ. ಕಾಂಗ್ರೆಸ್‌ಗೆ ಎಸ್ಸಿ-ಎಸ್ಟಿ ಮತ್ತು ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರ ಮತ ಸಿಕ್ಕಿರುವುದು ಸ್ಪಷ್ಟ. ಆದರೂ, ಇಲ್ಲಿ ಶಾಸಕರಿಗೆ ಹೆಚ್ಚಿನ ಸ್ಥಾನಮಾನ ಸಿಕ್ಕಿಲ್ಲ ಎಂಬುದನ್ನು ಶಾಮನೂರು ತಿಳಿದುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.