ಜಿಲ್ಲೆ

ಬಿಎಸ್‌ಪಿ ಅಭ್ಯರ್ಥಿ ದಿವಿಲ್ ಕುಮಾರ್ ಇಂದು ನಾಮಪತ್ರ ಸಲ್ಲಿಕೆ

reportermys

ಮಡಿಕೇರಿ: ಬಹುಜನ ಸಮಾಜ ಪಕ್ಷದಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಎ.ಎ.ದಿವಿಲ್ ಕುಮಾರ್ ಇಂದು(ಏ.೨೦) ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ರೇವತಿ ರಾಜ್ ತಿಳಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಬೆಳಗ್ಗೆ ೯ ಗಂಟೆಗೆ ಪಾಲೇಮಾಡು ಕಾನ್ಸಿರಾಮ್‌ನಗರದಿಂದ ಮೆರವಣಿಗೆ ಆರಂಭವಾಗಲಿದೆ. ನಂತರ ಮೂರ್ನಾಡ್, ಹಾಕತ್ತೂರು, ಸುದರ್ಶನ್ ವೃತ್ತ, ಜಿ.ಟಿ.ವೃತ್ತ, ಟೌನ್‌ಹಾಲ್, ಖಾಸಗಿ ಬಸ್ ನಿಲ್ದಾಣ, ಇಂದಿರಗಾಂಧಿ ವೃತ್ತ, ರಾಜಸೀಟ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.


ಕೊಡಗು ಜಿಲ್ಲೆ ವೀರ ಯೋಧರ ನಾಡಾಗಿದೆ. ಅವರಿಗೆ ಯೋಧನಮನ ಸಲ್ಲಿಸುವ ಸಲುವಾಗಿ ಮೆರವಣಿಗೆ ಸಂದರ್ಭ ನಗರದಲ್ಲಿರುವ ೭ ಪುತ್ಥಳಿಗೆ ಮಾರ್ಲಾಪಣೆ ಮಾಡಲಾಗುವುದು. ನಂತರ ನಾಮಪತ್ರ ಸಲ್ಲಿಸಿ, ಗಾಂಧಿ ಮೈದಾನದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದ ಅವರು, ಅಸ್ಥಿತ್ವ ಕಂಡುಕೊಳ್ಳುವ ಸಲುವಾಗಿ ಸ್ಪರ್ಧೆ ಮಾಡುತ್ತಿದ್ದು, ಪ್ರಸ್ತುತ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ೧೫-೨೦ ಸಾವಿರ ಮತಗಳನ್ನು ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.


ಅಭ್ಯರ್ಥಿ ಎ.ಎ.ದಿವಿಲ್ ಕುಮಾರ್ ಮಾತನಾಡಿ, ನಾನು ಮೂಲತಃ ವಿರಾಜಪೇಟೆ ತಾಲೂಕಿನ ಕಂಡಗಾಲ ಗ್ರಾಮದ ಒಂದನೇ ರುದ್ರಗುಪ್ಪೆ ನಿವಾಸಿಯಾಗಿದ್ದು, ಪಕ್ಷದಲ್ಲಿ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಜಿಲ್ಲೆಯಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದ ಅವರು, ಬಹುಜನ ಸಮಾಜ ಪಕ್ಷವನ್ನು ಒಂದು ಸಮುದಾಯದ ಪಕ್ಷ ಎಂದು ಬಿಂಬಿಸಲಾಗುತ್ತಿದೆ. ಆದರೆ, ಬಡವ ಹಾಗೂ ಬಹುಜನರ ಪರವಿರುವ ಪಕ್ಷವಾಗಿದೆ ಎಂದರು.


ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬೆಳ್ಯಪ್ಪ, ಕಾರ್ಯಕರ್ತ ರವಿ ಉಪಸ್ಥಿತರಿದ್ದರು.