ಮಡಿಕೇರಿ:
ಕೊಡಗಿನಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆ ಬಗ್ಗೆ ಗ್ರಾಹಕರ ದೂರು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ತುಂಬಾ ಚಿಂತಾಜನಕ ಸ್ಥಿತಿ ತಲುಪಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ಸೇವೆಗೆ ನೂತನ ತಂತ್ರಜ್ಞಾನ ಬಳಕೆ ಬಗ್ಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಡಿರುವ ಮನವಿಗೆ ದೂರಸಂಪರ್ಕ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಕರಾತ್ಮಕವಾಗಿ ಸ್ಪಂದಿಸಿರುವುದು ಸ್ಥಳೀಯ ಗ್ರಾಹಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ.
ಎದುರಿಗೆ ನಿಂತಿದ್ದ ವ್ಯಕ್ತಿಗೆ ಕರೆ ಮಾಡಿದರೂ 'ನಾಟ್ ರೀಚೇಬಲ್' ಧ್ವನಿ ಸಂದೇಶ, ಅಸ್ಪಷ್ಟ ಧ್ವನಿ, ಪದೇ ಪದೇ ಕಾಲ್ ಡ್ರಾಪ್, 'ವ್ಯಾಪ್ತಿ ಪ್ರದೇಶದಲ್ಲಿ ಇಲ್ಲ' ಎನ್ನುವ ಸಂದೇಶ, ಆಮೆ ವೇಗದ ಇಂಟರ್‌ನೆಟ್, ಅದರಲ್ಲೂ ಆಗಾಗ್ಗೆ ಕಡಿತಗೊಂಡು ತಾಳ್ಮೆ ಪರೀಕ್ಷೆ ಮಾಡುವÀ ಅಂತರ್ಜಾಲ ಸಂಪರ್ಕ, ದೂರು ಕೊಡಲೆಂದು ಇಲಾಖೆಗೆ ಕರೆ ಮಾಡಿದರೆ ಸ್ವೀಕರಿಸದ ಸಿಬ್ಬಂದಿ, ಕಚೇರಿಗೆ ತೆರಳಿದರೆ ಸೌಜನ್ಯ ಮರೆತು ವರ್ತಿಸುವ ಅಧಿಕಾರಿಗಳು ಹೀಗೆ ಬಿಎಸ್‌ಎನ್‌ಎಲ್ ಅಸಮರ್ಪಕ ಸೇವೆಗಳಿಂದ ಜಿಲ್ಲೆಯ ಗ್ರಾಹಕರು ರೋಸಿ ಹೋಗಿದ್ದಾರೆ.
ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಬಿಎಸ್‌ಎನ್‌ಎಲ್ ಟವರ್‌ಗಳಿವೆ. ರಾಜ್ಯದಲ್ಲೇ ಅತೀ ಹೆಚ್ಚು ಬಿಎಸ್‌ಎನ್‌ಎಲ್ ಟವರ್‌ಗಳು ಪುಟ್ಟ ಜಿಲ್ಲೆ ಕೊಡಗಿನಲ್ಲಿದೆ. ಆದರೆ ಇದರಿಂದ ಗ್ರಾಹಕರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಮಡಿಕೇರಿಯಲ್ಲಿ ಜೋರಾಗಿ ಮಳೆ ಬಂದಾಗ ಸ್ವಲ್ಪ ಮಟ್ಟಿಗೆ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕದಲ್ಲಿ ತೊಂದರೆ ಆಗುತ್ತದೆ ಎನ್ನುವುದನ್ನು ಹೊರತುಪಡಿಸಿದರೆ ಮೊಬೈಲ್ ಸಂಪರ್ಕದಲ್ಲಿ ಉಳಿದ ಕಡೆಗೆ ಹೋಲಿಸಿದರೆ ಪರ್ವಾಗಿಲ್ಲ ಎನ್ನುವಂತಿದೆ. ಆದರೆ ಸೋಮವಾರಪೇಟೆ ಮತ್ತು ವಿರಾಜಪೇಟೆ ಪಟ್ಟಣಗಳಲ್ಲಿ ಇಷ್ಟು ಒಳ್ಳೆಯ 'ಸೇವೆ' ಇಲ್ಲ.
ಬೆಟ್ಟ-ಗುಡ್ಡಗಳಿಂದ ಕೂಡಿರುವ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಇನ್ನು ಕೂಡ ಖಾಸಗಿ ಮೊಬೈಲ್ ಸೇವಾ ಸಂಸ್ಥೆಗಳು ಕಾಲಿಟ್ಟಿಲ್ಲ. ಹಾಗಾಗಿ ಇಂತಹ ಪ್ರದೇಶಗಳಲ್ಲಿ ಇಂದಿಗೂ ಬಿಎಸ್‌ಎನ್‌ಎಲ್ ಅವಲಂಬನೆ ಅನಿವಾರ್ಯವಾಗಿದೆ. ಪಟ್ಟಣದ ಮಂದಿ 5 ಜಿ ಜಮಾನದಲ್ಲಿ ಈಜಾಡುತ್ತಿದ್ದರೆ, ಕೊಡಗಿನ ಗ್ರಾಮೀಣ ಪ್ರದೇಶದ ನಿವಾಸಿಗಳು ಈಗಲೂ ಮತ್ತೊಂದು ಮೊಬೈಲ್‌ಗೆ ಕರೆ ಮಾಡಲೂ ಪರದಾಡುವ ಸ್ಥಿತಿ ಇದೆ.
ಮಳೆಗಾಲದಲ್ಲಿ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಪದೇ ಪದೇ ವಿದ್ಯುತ್ ಕಡಿತ ಸಾಮಾನ್ಯ. ವಿದ್ಯುತ್ ಮಾರ್ಗದ ಮೇಲೆ ಮರ, ಮರದ ರೆಂಬೆ ಬಿದ್ದು ವಿದ್ಯುತ್ ಕೈ ಕೊಡುತ್ತಿರುತ್ತದೆ. ಬಿಎಸ್‌ಎನ್‌ಎಲ್ ಲ್ಯಾಂಡ್ ಲೈನ್ ಇದ್ದಾಗ ಮಳೆಗಾಲದಲ್ಲಿ ಇದೇ ಸಮಸ್ಯೆ ಎದುರಾಗುತ್ತಿತ್ತು. ಎಲ್ಲಾದರೂ ತಂತಿ ಮೇಲೆ ಮರ ಬಿದ್ದರೆ ಫೋನ್ ಸಂಪರ್ಕ ಕಡಿತ ಆಗುತ್ತಿತ್ತು. ಈಗ ಮೊಬೈಲ್ ಫೋನ್ ಯುಗದಲ್ಲೂ ಇದೇ ಕತೆ ಪುನರಾವರ್ತನೆ ಆಗುತ್ತಿದೆ. ವಿದ್ಯುತ್ ಇಲ್ಲದಿದ್ದರೆ ಮೊಬೈಲ್ ಸಂಪರ್ಕವೂ ಇರುವುದಿಲ್ಲ. ಗ್ರಾಮೀಣ ಪ್ರದೇಶದ ಟವರ್‌ಗಳಿಗೆ ವಿದ್ಯುತ್ ಪೂರೈಸುವ ಜನರೇಟರ್‌ಗಳಿಗೆ ಇಲಾಖೆ ಸರಿಯಾಗಿ ಡೀಸೆಲ್ ಕೊಡದಿರುವುದರಿಂದ ಈ ಸಮಸ್ಯೆ ಎದುರಾಗಿದೆ.
ಸಿದ್ದಾಪುರ ಭಾಗದಲ್ಲಿ ಅತೀ ಹೆಚ್ಚು ಬಿಎಸ್‌ಎನ್‌ಎಲ್ ಸಿಮ್ ಸಂಪರ್ಕ ಪಡೆದ ಗ್ರಾಹಕರಿದ್ದಾರೆ. 30 ಸಾವಿರಕ್ಕೂ ಅಧಿಕ ಸಿಮ್ ಈ ಭಾಗದಲ್ಲಿ ಬಳಕೆ ಆಗುತ್ತಿರುವ ಮಾಹಿತಿ ಇದೆ. ಆದರೆ ಅದಕ್ಕೆ ಸರಿಯಾಗಿ ಇಲ್ಲಿ ಟವರ್‌ಗಳು ಇಲ್ಲ. ಸಂಪರ್ಕ ದಟ್ಟಣೆ ಹೆಚ್ಚು ಇರುವುದರಿಂದ ಟವರ್‌ನಿಂದ ಅರ್ಧ ಕಿಲೋಮೀಟರ್ ದೂರ ಹೋದರೂ 'ನಾಟ್ ರೀಚೇಬಲ್' ಬರುತ್ತದೆ. ನಾಪೋಕ್ಲು, ಗೋಣಿಕೊಪ್ಪಲು, ಸುಂಟಿಕೊಪ್ಪ, ಕುಶಾಲನಗರ, ಭಾಗಮಂಡಲ, ಶನಿವಾರಸಂತೆ, ಕೊಡ್ಲಿಪೇಟೆ, ಚೇರಂಬಾಣೆ, ವ್ಯಾಪ್ತಿಯಲ್ಲೂ ಇಂತಹದ್ದೇ ಸಮಸ್ಯೆ ಇದೆ. ಮೊಬೈಲ್‌ನಲ್ಲಿ ಮಾತನಾಡಬೇಕೆಂದರೆ ಪಟ್ಟಣಗಳಿಗೆ ಬಂದು ಟವರ್ ಹತ್ತಿರ ಪ್ರಯತ್ನಿಸುವ ಅನಿವಾರ್ಯತೆಯಲ್ಲಿ ಗ್ರಾಮೀಣ ಭಾಗದ ಜನರು ಇದ್ದಾರೆ.
ಮೇ ಅಂತ್ಯ ಮತ್ತು ಜೂನ್ ಮೊದಲ ವಾರದ ಅಬ್ಬರದ ಮಳೆ ಸಂದರ್ಭ ಗ್ರಾಮೀಣ ಪ್ರದೇಶದ ಬಿಎಸ್‌ಎನ್‌ಎಲ್ ಗ್ರಾಹಕರು ಕನಿಷ್ಠ ಒಂದು ಕರೆ ಮಾಡಲು ಕೂಡ ನಡೆಸಿದ ಪರದಾಟ ಅಷ್ಟಿಷ್ಟಲ್ಲ. ವಿದ್ಯುತ್ ಕೈ ಕೊಟ್ಟ ಕೂಡಲೇ ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್‌ಎನ್‌ಎನ್ ಟವರ್‌ಗಳೂ ಆಫ್ ಆಗಿ ಬಿಡುತ್ತಿವೆ. ನಿಮ್ಮ ಸಿಮ್‌ಗಳನ್ನು 4ಜಿಗೆ ಬದಲಾಯಿಸಿಕೊಳ್ಳಿ ಎಂದು ಗ್ರಾಹಕರಿಗೆ ಬಿಎಸ್‌ಎನ್‌ಎಲ್ ಆಗಾಗ್ಗೆ ನೆನಪಿಸುತ್ತಿರುತ್ತದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾಗಿ 2ಜಿ ಸೇವೆ ಕೂಡ ಲಭ್ಯ ಆಗುತ್ತಿಲ್ಲ.
ಬಿಎಸ್‌ಎನ್‌ಎಲ್ ಅವ್ಯವಸ್ಥೆ ಬಗ್ಗೆ ಗ್ರಾಹಕರು, ಸ್ಥಳೀಯ ಮುಖಂಡರು ಈಗಾಗಲೇ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗಮನಕ್ಕೆ ತಂದಿದ್ದಾರೆ. ಈ ಬೆನ್ನಲ್ಲೇ ನವದೆಹಲಿಯಲ್ಲಿ ಕೇಂದ್ರ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿದ ಸಂಸದ ಯದುವೀರ್ ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ಸೇವೆಯ ದುಸ್ಥಿತಿ ಬಗ್ಗೆ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಅತ್ಯಂತ ತುರ್ತಾಗಿ ಸಮಸ್ಯೆ ಪರಿಹರಿಸುವಂತೆ ಮನವಿಯನ್ನೂ ಮಾಡಿದ್ದಾರೆ.
ಕೊಡಗಿನಲ್ಲಿ ಸುರಿದಿರುವ ಧಾರಾಕಾರ ಮಳೆಯಿಂದ ಸಾಕಷ್ಟು ಸಮಸ್ಯೆಗಳು ಆಗಿದೆ. ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸೇವೆ ಅತ್ಯಂತ ಕಳಪೆಯಾಗಿದೆ. ಇಲ್ಲಿ ಟವರ್‌ಗಳನ್ನು ಬದಲಿಸಬೇಕು, ಉತ್ತಮ ಕನೆಕ್ಟೆವಿಟಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಕಳಪೆ ನೆಟ್‌ವರ್ಕ್ ಸಂಪರ್ಕದಿAದ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ, ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅಥವಾ ಡಿಜಿಟಲ್ ಕೋರ್ಸ್ಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೇ ಸರ್ಕಾರಿ ಕಚೇರಿಗಳ ದಿನನಿತ್ಯದ ಕೆಲಸಗಳಿಗೂ ತೊಂದರೆ ಆಗುತ್ತಿರುವ ಬಗ್ಗೆ ಸಚಿವರಿಗೆ ಮಾಹಿತಿ ನೀಡಲಾಗಿದೆ.
ಪವರ್ ಬ್ಯಾಕ್ ಅಪ್ ಸಮಸ್ಯೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಮಾರ್ಚ್ 8ರಂದು ನಡೆದಿದ್ದ ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿರುವ ಬಗ್ಗೆ ದೂರಿಕೊಂಡಿದ್ದಾರೆ. ಸಂಸದರ ಸೂಚನೆಯನ್ನೇ ಪಾಲಿಸದ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬಹುದು ಎನ್ನುವುದು ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಜಿಲ್ಲೆಯಲ್ಲಿನ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕೆ ಆಧುನಿಕ ತಂತ್ರಜ್ಞಾನ ಬಳಸುವಂತೆ ಸಂಸದ ಯದುವೀರ್ ಮಾಡಿಕೊಂಡಿರುವ ಮನವಿಗೆ ದೂರಸಂಪರ್ಕ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲು ಸಾಧ್ಯವಾಗದ ಸ್ಥಳಗಳಿಗೆ ಉಪಗ್ರಹ ಮೂಲಕ ಸಂಪರ್ಕ ಕೊಡುವ ವ್ಯವಸ್ಥೆಯನ್ನು ದೇಶದ ಹಲವೆಡೆ ಗುಡ್ಡಗಾಡು ಪ್ರದೇಶಗಳಲ್ಲಿ ಬಿಎಸ್‌ಎನ್‌ಎಲ್ ಪರಿಚಯಿಸಿದ್ದು, ಇಂಥದ್ದೇ ಸೇವೆ ಕೊಡಗಿನಲ್ಲೂ ಲಭ್ಯವಾಗಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಕೊಡುವಂತಾಗಬೇಕು ಎಂದು ಸಚಿವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಕೊಡಗಿನಲ್ಲಿ ಬಿಎಎನ್‌ಎಲ್ ಸೇವೆ ವ್ಯತ್ಯಯ ಆಗುತ್ತಿರುವ ಬಗ್ಗೆ ಸಂಸದರಿAದ ಮಾಹಿತಿ ಪಡೆದುಕೊಂಡಿರುವ ಸಚಿವರು ಉಪಗ್ರಹ ಮೂಲಕ ಸಂಪರ್ಕ ಕಲ್ಪಿಸುವ ತಂತ್ರಜ್ಞಾನ ಕಲ್ಪಿಸುವುದಕ್ಕೆ ಪೂರಕ ಸ್ಪಂದನೆ ನೀಡಿದ್ದು, ಅಧಿಕಾರಿಗಳ ಜತೆ ಚರ್ಚಿಸಿ ಕ್ರಮವಹಿಸುವುದಾಗಿ ಹೇಳಿರುವುದು ಗ್ರಾಮೀಣ ಭಾಗದ ಬಿಎಸ್‌ಎನ್‌ಆಲ್ ಗ್ರಾಹಕರಲ್ಲಿ ನಿರೀಕ್ಷೆಗಳನ್ನು ಚಿಗುರಿಸಿದೆ.
ಕೊಡಗಿನಲ್ಲಿ ಬಿಎಸ್‌ಎನ್‌ಎಲ್‌ನ 15 ಟವರ್‌ಗಳಲ್ಲಿ ಸಮಸ್ಯೆ ಇದೆ. 10 ಟವರ್‌ಗಳಿಗೆ ಬ್ಯಾಕಪ್ ಪವರ್ ಇಲ್ಲ. ಜಿಲ್ಲೆಯ ಬಿಎಸ್‌ಎನ್‌ಎಲ್ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ವಿಷಯವನ್ನು ದೂರಸಂಪರ್ಕ ಖಾತೆ ಸಚಿವರ ಗಮನಕ್ಕೆ ತರಲಾಗಿದೆ. 12 ಹೊಸ ಟವರ್‌ಗಳು ಜಿಲ್ಲೆಗೆ ಬರಲಿದೆ. ಸಿಗ್ನಲ್ ಸಮಸ್ಯೆ ಇರುವ ಕಡೆಗಳಲ್ಲಿ ಅಧ್ಯಯನ ನಡೆಸಲಾಗುತ್ತದೆ. ಸಂಪರ್ಕ ಸಮಸ್ಯೆ ಇರುವಲ್ಲಿಗೆ ನೂತನ ತಂತ್ರಜ್ಞಾನ ಬಳಸಿಕೊಂಡು ಸಂಪರ್ಕ ಕಲ್ಪಿಸುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ.
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು-ಕೊಡಗು ಸಂಸದ