ಜಿಲ್ಲೆ

ನೇಮಕಾತಿ ರ್ಯಾಲಿಗೆ ವ್ಯವಸ್ಥೆ ಮಾಡಿಕೊಳ್ಳಿ, ಡಿಸಿ ನಲಿನ್​ ಅತುಲ್​ ಸೂಚನೆ

ಕೊಪ್ಪಳ: ಸೇನೆಯ ವಿವಿಧ ಹುದ್ದೆಗಳ ಭರ್ತಿಗೆ ಕೊಪ್ಪದಲ್ಲಿ ನೇಮಕಾತಿ ರ್ಯಾಲಿ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.

ಬೆಳಗಾವಿ ಸೇನಾ ನೇಮಕಾತಿ ರ್ಯಾಲಿ ಕಚೇರಿಯಿಂದ ಡಿ.3ರಿಂದ 15ವರೆಗೆ ರ್ಯಾಲಿ ನಡೆಯಲಿದೆ. ಬೆಳಗಾವಿ, ಕಲಬುರ್ಗಿ, ಕೊಪ್ಪಳ, ಯಾದಗಿರಿ, ಬೀದರ್​ ಮತ್ತು ರಾಯಚೂರು ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಸುಗಮವಾಗಿ ನಡೆಸಬೇಕಿದೆ. ಅಭ್ಯರ್ಥಿಗಳಿಗೆ ತೊಂದರೆ ಆಗದಂತೆ, ಕ್ರೀಡಾಂಗಣದಲ್ಲಿ ಸೂಕ್ತ ಬ್ಯಾರಿಕೇಡಿಂಗ್​ ವ್ಯವಸ್ಥೆ, ತಾತ್ಕಾಲಿಕ ಶೌಚಗೃಹ, ಕುಡಿವ ನೀರು, ವಿದ್ಯುತ್​ ದೀಪ, ಹಣ್ಣು, ಉಪಾಹಾರ ಮಳಿಗೆ ಸೇರಿ ಇತರ ವ್ಯವಸ್ಥೆ ಮಾಡಿ. ಅಹಿತಕರ ಘಟನೆಗಳಿಗೆ ಅವಕಾಶ ನೀಡಬೇಡಿ. ಶಿಸ್ತುಬದ್ಧವಾಗಿ ನಡೆಸಿ. ವಿವಿಧ ಇಲಾಖೆಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದು, ಎಲ್ಲರೂ ಅವರವರ ಕರ್ತವ್ಯ ಸರಿಯಾಗಿ ನಿಭಾಯಿಸುವಂತೆ ತಾಕೀತು ಮಾಡಿದರು.

ನೇಮಕಾತಿ ನಿರ್ದೇಶಕ ನಿಶಾಂತ್​ ಶೆಟ್ಟಿ ಮಾತನಾಡಿ, ರ್ಯಾಲಿಯಲ್ಲಿ ಆರು ಜಿಲ್ಲೆಗಳ 9,130 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ಕರ್ನಲ್​ ಎ.ಕೆ.ಉಪಾಧ್ಯೇಯ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಬಾರಿ ಅಚ್ಚುಕಟ್ಟಾಗಿ ನೇಮಕಾತಿ ರ್ಯಾಲಿ ನಡೆದಿದೆ. ಈ ಬಾರಿಯೂ ಇಲ್ಲಿಯೇ ಹಮ್ಮಿಕೊಂಡಿದ್ದೇವೆ. ಸಮರ್ಪಕವಾಗಿ ಆಯೋಜಿಸಲು ಜಿಲ್ಲಾಡಳಿತ ಹಾಗೂ ಇತರ ಇಲಾಖೆಗಳ ಸಹಕಾರ ಅಗತ್ಯವೆಂದರು.

ಎಸ್ಪಿ ಡಾ. ರಾಮ್​ ಎಲ್​.ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಎಎಸ್ಪಿ ಹೇಮಂತ್​ ಕುಮಾರ್​, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​, ಮೇಜರ್​ ಎ.ವಿಶ್ವನ್ಸಾಥ ಸುಬೆದಾರ, ಮೆಜರ್​ ದಿನೇಶ ಲೋಹಿಯಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು ತಳವಾರ, ಹಿಂದುಳಿದ ವರ್ಗಗಳ ಇಲಾಖೆ ಉಪನಿರ್ದೇಶಕ ಸುರೇಶ ಕೋಕರೆ, ತಹಸೀಲ್ದಾರ್​ ವಿಠ್ಠಲ ಜಾಬಗೌಡರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ ಇತರರಿದ್ದರು.