ಜಿಲ್ಲೆ

ಬಿಎಸ್​ವೈ ಅವಧಿ ಪೂರ್ಣ ನಿಶ್ಚಿತ

ಬೆಂಗಳೂರು: ಸಿಎಂ ಯಡಿಯೂರಪ್ಪ ಅಧಿಕಾರಾವಧಿ ಪೂರೈಸುತ್ತಾರೆಂದು ಉತ್ತರಾಖಂಡ್​ನ ಕೇದಾರ ಪೀಠದ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಸ್ವಾಮೀಜಿ ಹೇಳಿದ್ದಾರೆ.

ಶ್ರೀ ಹಿಮವದ್ ಕೇದಾರ ಪೂಜಾ ಸಮಿತಿ ಶನಿವಾರ ಎನ್​ಎಂಕೆಆರ್​ವಿ ಕಾಲೇಜಿನಲ್ಲಿ ಆಯೋಜಿಸಿದ್ದ 7ನೇ ವರ್ಷದ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಬಿಎಸ್​ವೈ ಕೇದಾರನಾಥಕ್ಕೆ ಭೇಟಿ ನೀಡಿದ್ದಾಗಲೇ ‘ನೀವು ಮತ್ತೆ ಸಿಎಂ ಆಗುತ್ತೀರಿ’ ಎಂದು ಭವಿಷ್ಯ ನುಡಿದಿದ್ದೆ. ಅದರಂತೆ ಇಂದು ಸಿಎಂ ಆಗಿ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರು ತಮ್ಮ ಅಧಿಕಾರಾವಧಿಯನ್ನು ಸಂಪೂರ್ಣವಾಗಿ ಪೂರೈಸುತ್ತಾರೆ. ಇದಕ್ಕಾಗಿ ನಾವು ಭಸ್ಮ ಹಚ್ಚಿದ್ದೇವೆ ಎಂದರು.

ಯಡಿಯೂರಪ್ಪ ಮಾತನಾಡಿ, ಮುಂದಿನ ಮೂರೂವರೆ ವರ್ಷ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ರೂಪಿಸುತ್ತೇನೆ ಎಂದು ಭರವಸೆ ನೀಡಿದರು.

ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ಶ್ರೀ ಜಗದೀಶ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಶಿವಪ್ರಕಾಶ ಸ್ವಾಮೀಜಿ, ಶ್ರೀ ನಾಲ್ವಡಿ ಶಾಂತಲಿಂಗ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಇಸ್ರೋ ಮಾಜಿ ಅಧ್ಯಕ್ಷ ಕಿರಣ್​ಕುಮಾರ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಎಲ್.ರವಿಸುಬ್ರಮಣ್ಯ ಮತ್ತಿತರರು ಉಪಸ್ಥಿತರಿದ್ದರು.