ಜಿಲ್ಲೆ

ರಾಮಲಿಂಗೇಶ್ವರ ದೇಗುಲ ಸ್ಥಳಾಂತರ,ಉಣಕಲ್ಲನಲ್ಲಿ ಭಕ್ತರು, ಜನಪ್ರತಿನಿಧಿಗಳ ಸಭೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಕ್ರಾಸ್ ಬಳಿ ಇರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಸ್ಥಳಾಂತರ ಕುರಿತು ಭಕ್ತರು ಹಾಗೂ ಜನಪ್ರತಿನಿಧಿಗಳ ಸಭೆ ಶನಿವಾರ ನಡೆಯಿತು.

ಈ ದೇವಸ್ಥಾನವು ಬಿಆರ್ಟಿಎಸ್ ಯೋಜನೆಯ ಕಾರಿಡಾರ್ ವ್ಯಾಪ್ತಿಯಲ್ಲಿ ಬರುವುದರಿಂದ ಈಗಾಗಲೇ ಸ್ಥಳಾಂತರಕ್ಕೆ ನೋಟಿಸ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಿಆರ್ಟಿಎಸ್ ಕಂಪನಿಯು ಮನವಿ ಮಾಡಿದ್ದರಿಂದ ಶನಿವಾರ ಭಕ್ತರು ಸಭೆ ಸೇರಿದ್ದರು.

ಶಾಸಕ ಮಹೇಶ ಟೆಂಗಿನಕಾಯಿ ಅವರು ದೇಗುಲಕ್ಕೆ ಭೇಟಿ ನೀಡಿ ಭಕ್ತರೊಂದಿಗೆ ಸಮಾಲೋಚನೆ ನಡೆಸಿದರು. ಸ್ಥಳಾಂತರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚಚಿರ್ಸಿದರು.

ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಶಾಸಕರು, ದೇಗುಲ ಸ್ಥಳಾಂತರಕ್ಕಾಗಿ ನೋಟಿಸ್ ಬಂದಿದೆ. ಇದಕ್ಕಾಗಿ ದೇವಸ್ಥಾನಕ್ಕೆ ಆಗಮಿಸಿ ಭಕ್ತರೊಂದಿಗೆ ಮಾತುಕತೆ ನಡೆಸಲಾಯಿತು. ದೇವಸ್ಥಾನಕ್ಕಾಗಿ 10 ಗುಂಟೆ ಜಾಗ ಪಕ್ಕದಲ್ಲಿ ನೀಡಲಾಗಿದೆ. ಹಾಗಾಗಿ ಸ್ಥಳಾಂತರ ಪ್ರಕ್ರಿಯೆ ಹೇಗೆ ನಡೆಸಬೇಕೆಂಬ ಬಗ್ಗೆ ನಿರ್ಧರಿಸಲಾಯಿತು ಎಂದು ತಿಳಿಸಿದರು.

ಬಿಆರ್ ಟಿಎಸ್ ಕಂಪನಿಯು ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧಿನ ಪ್ರಕ್ರಿಯೆ ನಡೆಸಿದೆ. ಈ ದಿಸೆಯಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಸ್ಥಳಾಂತರಿಸುವ ಹಾಗೂ ಇದರ ಸಾಧಕ ಬಾಧಕಗಳ ಕುರಿತು ಚಚಿರ್ಸಲಾಯಿತು ಎಂದು ಪಾಲಿಕೆ ಸದಸ್ಯ ರಾಜಣ್ಣ ಕೊರವಿ ತಿಳಿಸಿದ್ದಾರೆ.

ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ, ದೇವಸ್ಥಾನ ಟ್ರಸ್ಟ್ ಕಮಿಟಿ ಪ್ರಮುಖರು ಮತ್ತು ಸದಸ್ಯರು ಉಪಸ್ಥಿತರಿದ್ದರು.