ಹುಬ್ಬಳ್ಳಿ: ಬಿಆರ್ ಟಿಎಸ್ ಕಾರಿಡಾರ್ ನಲ್ಲಿ ಚಿಗರಿ ಬಸ್ಸುಗಳ ಕಾರ್ಯಾಚರಣೆಗೆ ಹೆಚ್ಚಿನ ಅನುಕೂಲವಾಗುವಂತೆ ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳಬೇಕು ಹಾಗೂ ಸದ್ಯ ಇರುವ ಸೌಕರ್ಯಗಳ ನಿರ್ವಹಣೆ ಮತ್ತು ನಿಲ್ದಾಣಗಳಲ್ಲಿ ಅಳವಡಿಸಿದ ಐಟಿಎಸ್ ತಾಂತ್ರಿಕತೆ ಮತ್ತು ಜಂಕ್ಶನ್ ಗಳಲ್ಲಿ ಅಳವಡಿಸಿದ ಸಿಗ್ನಲ್ ಉತ್ತಮ ನಿರ್ವಹಣೆ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಅವರು ಇಲ್ಲಿಯ ಬಿಆರ್ ಟಿಎಸ್ ಕಚೇರಿಯಲ್ಲಿ ಶನಿವಾರ ಯೋಜನೆಯ ಸದುಪಯೋಗ ಮತ್ತು ಆರ್ಥಿಕ ಸ್ಥಿತಿ ಉತ್ತಮ ಪಡಿಸುವ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಅವಳಿನಗರಗಳ ಮಧ್ಯ ಸಂಚರಿಸುವ ಚಿಗರಿ ಬಸ್ಸುಗಳ ಕಾರ್ಯಾಚರಣೆ ಮತ್ತು ಲಭ್ಯವಿರುವ ಬಸ್ಗಳನ್ನು ಉಪಯೋಗಿಸಿಕೊಂಡು ಸಾರ್ವಜನಿಕರಿಗೆ ಅನುಕೂಲಕರ ಸೇವೆ ಒದಗಿಸಬೇಕು. ಸಂಸ್ಥೆಯ ಆರ್ಥಿಕ ಸ್ಥಿತಿ ಉತ್ತಮ ಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬಿಆರ್ಟಿಎಸ್ ಸಾರಿಗೆ ಸೇವೆಯ ಬಗ್ಗೆ ಸಾರ್ವಜನಿಕ ಪ್ರಯಾಣಿಕರಿಂದ ಅಭಿಪ್ರಾಯ ತಿಳಿಯಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್, ಜಿಲ್ಲಾಧಿಕಾರಿ ದಿವ್ಯ ಪ್ರಭು, ಬಿಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ ಅವರು ಚಿಗರಿ ಬಸ್ ನಲ್ಲಿ ಪ್ರಯಾಣಿಸಿದರು.
ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣ, ನವನಗರ ಹಾಗೂ ಧಾರವಾಡ ಬಸ್ ಟರ್ಮಿನಲ್ ಗಳನ್ನು ವೀಕ್ಷಿಸಿ, ಪ್ರಯಾಣಿಕರ ಅಭಿಪ್ರಾಯ ಪಡೆದುಕೊಂಡರು. ಚಿಗರಿ ಬಸ್ಸುಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಉದ್ಘೋಷ (ಅನೌನ್ಸಮೆಂಟ್), ಮಾಹಿತಿ ಫಲಕ, ನಿಲುಗಡೆ ಬಟನ್ ಉತ್ತಮವಾಗಿ ಕಾರ್ಯಾನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಂಚಾರ ದಟ್ಟಣೆ ನಿವಾರಿಸಲು ಹುಬ್ಬಳ್ಳಿ-ಧಾರವಾಡ ಅವಳಿನಗರದ ಮಧ್ಯ ಸಂಚರಿಸುವ ಪ್ರಯಾಣಿಕರ ಸಮೀಕ್ಷೆ ನಡೆಸಿ, ಇರುವ ಬಸ್ಸುಗಳಲ್ಲಿಯೇ ಪ್ರಯಾಣಿಕರಿಗೆ ಅಚ್ಚುಕಟ್ಟಾದ ಸೇವೆ ಒದಗಿಸಲು ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಬಿಆರ್ ಟಿಎಸ್ ಕಾರಿಡಾರ್ ಗಳಿಗೆ ಹೊಂದಿಕೊಂಡು ಒಳಗಡೆ ಇರುವ ಪ್ರಯಾಣಿಕರಿಗೆ ಚಿಗರಿ ಸಂಪರ್ಕ ಸಾರಿಗೆ ಬಸ್ಸುಗಳ ಮೂಲಕ ನಿಲ್ದಾಣಕ್ಕೆ ಕರೆತರುವ ವ್ಯವಸ್ಥೆ ಮಾಡಲು ವಾಯವ್ಯ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ತಿಳಿಸಿದರು.
ಪೊಲೀಸ್ ಅಧಿಕಾರಿಗಳು, ಬಿಆರ್ ಟಿಎಸ್ ಪ್ರಧಾನ ವ್ಯವಸ್ಥಾಪಕರು, ಮುಖ್ಯ ಸಂಚಾರ ವ್ಯವಸ್ಥಾಪಕರು, ವಿಭಾಗೀಯ ನಿಯಂತ್ರಣಾಧಿಕಾರಿ, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.