ಯಳಂದೂರು: ತಾಲೂಕಿನ ಮಲ್ಕಿ ಬೆಟ್ಟದಲ್ಲಿ ಶುಕ್ರವಾರ ಕಾಣಿಸಿಕೊಂಡ ಕಾಳ್ಗಿಚ್ಚಿನಿಂದ 30ಕ್ಕೂ ಎಕರೆ ಪ್ರದೇಶಕ್ಕೂ ಹೆಚ್ಚು ಅರಣ್ಯ ಪ್ರದೇಶ ಭಸ್ಮವಾಗಿದೆ.
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ ವಿಭಾಗದ ಯಳಂದೂರು ವನ್ಯಜೀವಿ ಉಪವಿಭಾಗದ ಯಳಂದೂರು ವನ್ಯಜೀವಿ ವಲಯದ ಬಿ.ಆರ್.ಹಿಲ್ಸ್ ಶಾಖೆಯ ಮಲ್ಲಿ ಗಸ್ತಿನ ಶ್ರೀ ಬಿಳಿಗಿರಿರಂಗನಾಥಸ್ವಾಮಿ ಟೆಂಪಲ್ ಫಾರೆಸ್ಟ್ ರಿಸರ್ವ್‌ನ ಚಿಕ್ಕಮಲ್ಕಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿತು. ಕೂಡಲೇ 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಬೆಂಕಿಬಿದ್ದ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಯತ್ನಿಸುತ್ತಿದ್ದರು. ಈ ವೇಳೆ ವೇಗವಾಗಿ ಗಾಳಿ ಬೀಸಿದ ಪರಿಣಾಮ 30 ಎಕರೆಗೂ ಹೆಚ್ಚು ಅರಣ್ಯ ಪ್ರದೇಶಕ್ಕೆ ಬೆಂಕಿ ಹರಡಿತ್ತು. ಅರಣ್ಯ ಭಾಗದಲ್ಲಿ ಹರಡಿದ್ದ ನೆಲಬೆಂಕಿಯನ್ನು ಸಂಜೆ ವೇಳೆಗೆ ಸಂಪೂರ್ಣವಾಗಿ ನಂದಿಸಲಾಗಿದೆ ಎಂದು ಯಳಂದೂರು ವಲಯ ವ್ಯಾಪ್ತಿಯ ಎಸಿಎಫ್ ನಂದಗೋಪಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.