ಜಿಲ್ಲೆ

ಸಮಗ್ರ ಕೃಷಿಯಲ್ಲಿ ಲಾಭಕಂಡ ಸಹೋದರರು

ಸುಂಟಿಕೊಪ್ಪ: ಒಂದೇ ಬೆಳೆ ಅಥವಾ ವಾರ್ಷಿಕ ಫಸಲನ್ನು ನಂಬಿಕೊಳ್ಳದೆ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಯಶಸ್ವಿಯಾದವರ ಸಾಲಿನಲ್ಲಿ ಸುಂಟಿಕೊಪ್ಪ ಹೋಬಳಿ ನಾಕೂರು ಶಿರಂಗಾಲ ಗ್ರಾಮದ ಕೃಷಿಕ ಅಡಿಕೆರ ಶಾಂತಪ್ಪ ಹಾಗೂ ಅಡಿಕೆರ ಧರ್ಮಪ್ಪ ನಿಲ್ಲುತ್ತಾರೆ.

ಪದವಿ ಪೂರ್ವ ಶಿಕ್ಷಣ ಪಡೆದ ಸಹೋದರರು ನಂತರ ಪಾಲಕರೊಂದಿಗೆ ಕೃಷಿ ಚಟುವಟಿಕೆಯನ್ನು ನಿರ್ವಹಿಸಲು ಆರಂಭಿಸಿದರು. ಕಳೆದ 35 ವರ್ಷಗಳಿಂದ ಸಂಪೂರ್ಣ ಕೃಷಿಯಲ್ಲಿ ತೊಡಗಿಸಿಕೊಂಡರು. ಒಂದೇ ಬೆಳೆ ಅಥವಾ ವಾರ್ಷಿಕ ಫಸಲಿನ ಕೃಷಿ ಜತೆಗೆ ಅಲ್ಪಕಾಲದ ಬೆಳೆಗಳನ್ನು ಬೆಳೆಯುವುದು ಅರ್ಥಿಕ ಅಭಿವೃದ್ಧಿಗೆ ಪೂರಕ ಎಂಬುದನ್ನು ಕಂಡುಕೊಂಡ ಅವರು ಅದರಲ್ಲಿ ಹಗಲು ರಾತ್ರಿಯೆನ್ನದೆ ಶ್ರಮವಹಿಸಿ ದುಡಿದು ಯಶಸು ಕಂಡಿದ್ದಾರೆ. ಪೂರ್ವಜರ 17 ಎಕರೆ ಕೃಷಿ ಜಮೀನು ಹೊಂದಿರುವ ಅವರು ಕಾಫಿ, ಕರಿಮೆಣಸು, ಅಡಕೆ, ಏಲಕ್ಕಿ ಹಾಗೂ ತೆಂಗು ತೋಟವನ್ನು ಹೊಂದಿದ್ದಾರೆ.

ಜತೆಗೆ ಅಲ್ಪಕಾಲದ ಬೆಳೆಗಳಾದ ಕ್ಯೆನೆ, ಮರಗೆಣಸು, ಕೆಸವಿನಗೆಡ್ಡೆ, ಹಸಿಮೆಣಸಿನಕಾಯಿ, ಹೂಕೋಸ್, ಬೀನ್ಸ್ ಹಾಗೂ ಶುಂಠಿಯನ್ನು ಬೆಳೆಯುತ್ತಿದ್ದಾರೆ. ಗುಣಮಟ್ಟದ ತರಕಾರಿಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ಅಡಿಕೆರ ಶಾಂತಪ್ಪ ಅವರ ಕೃಷಿ ಉತ್ಪಾದನೆಗಳಿಗೆ ಒಳ್ಳೆಯ ಬೇಡಿಕೆಯಿದೆ ಎಂದು ಅರಿತು ವಾರ್ಷಿಕವಾಗಿ ಆದಾಯವನ್ನು ಗಳಿಸಿಕೊಳ್ಳುತ್ತಿದ್ದಾರೆ.

ಈ ಬಾರಿ ಕಾಫಿ, ಕರಿಮೆಣಸಿಗೆ ಉತ್ತಮ ಪೇಟೆ ಧಾರಣೆ ಬಂದಿದ್ದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುವ ಸಂದರ್ಭದಲ್ಲಿ ಮತ್ತೊಂದು ರೀತಿಯ ಸಂಕಷ್ಟವನ್ನು ಎದುರಿಸುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಡಾನೆ ಹಾವಳಿ ಒಂದೆಡೆಯಾದರೆ ಹಾಗೂ ಕಾಡು ಹಂದಿ ಗೆಡ್ಡೆಗೆಣಸುಗಳನ್ನು ನಾಶಗೊಳಿಸಿದರೆ, ಮುಳ್ಳುಹಂದಿಗಳು ಕರಿಮೆಣಸು ಬಳ್ಳಿಯ ಬುಡವನ್ನು ತುಂಡರಿಸುವ ಮೂಲಕ ಕರಿಮೆಣಸು ಬಳ್ಳಿಯನ್ನೇ ನಾಶಗೊಳಿಸುತ್ತಿರುವುದರಿಂದ ಕೃಷಿಕರು ಮತ್ತಷ್ಟು ಚಿಂತೆಗೀಡಾಗುವಂತೆ ಮಾಡಿದೆ ಎಂದು ಅಳಲು ತೊಡಿಕೊಳ್ಳುತ್ತಾರೆ ಅಡಿಕೆರ ಶಾಂತಪ್ಪ.

ಅಡಿಕೆರ ಶಾಂತಪ್ಪ ಹಾಗೂ ಧರ್ಮಪ್ಪ ಸ್ನೇಹಿತರೊಂದಿಗೆ ಸೇರಿಕೊಂಡು ಕೃಷಿ ಮಾಡಲು ಯೋಗ್ಯವಲ್ಲದ ಭೂಮಿ ಎಂದು ಬಿಟ್ಟ ಕಾಡು ಪ್ರದೇಶ, ಬರಡು ಭೂಮಿ ಎಂದು ಪಾಳುಬಿಟ್ಟ ಜಾಗದಲ್ಲಿ ಬಂಗಾರದ ಮನುಷ್ಯನಂತೆ ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ. ಕೃಷಿಯನ್ನು ಕಷ್ಟಪಡದೆ ಇಷ್ಟಪಟ್ಟು ಮಾಡಿದರೆ ಕೃಷಿ ಖುಷಿಯ ಕೆಲಸ ಎಂದು ಅರಿತುಕೊಂಡಿದ್ದಾರೆ. ಕೃಷಿ ಲಾಭದಾಯಕವಲ್ಲ ಎಂದು ಯುವಜನರು ಪಟ್ಟಣ, ನಗರ ಪ್ರದೇಶ ಸೇರುತ್ತಿರುವ ಈ ಸಂದರ್ಭದಲ್ಲಿ ಅಡಿಕೆರ ಶಾಂತಪ್ಪ ಹಾಗೂ ಧರ್ಮಪ್ಪ ಮಾದರಿಯಾಗಿದ್ದಾರೆ.

ಕಾಡು ಪ್ರದೇಶ, ಬರಡು ಮತ್ತು ಬಂಜಾರು ಭೂಮಿ ಎಂದು ಪಾಳುಬಿಟ್ಟ ಜಾಗವನ್ನು ಲಕ್ಷಾಂತರ ರೂ.ನೀಡಿ ವಾರ್ಷಿಕ ಗುತ್ತಿಗೆ ಪಡೆದು ಆ ಭೂಮಿಯನ್ನು ಸಮತಟ್ಟುಗೊಳಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದರಲ್ಲಿ ಆಲೂಗಡ್ಡೆ, ಕೇನೆ ಮರಗೆಣಸು, ಸಿಹಿಗೆಣಸು, ಕೆಸುವಿನಗೆಡ್ಡೆ ಸೇರಿದಂತೆ ಕೆಲವು ತರಕಾರಿ ಬೆಳೆಗಳಿಗೆ ಸಗಣಿ ಗೊಬ್ಬರ ಹಾಗೂ ಕಾಫಿ ಹೊಸ್ಕುಗಳನ್ನು ಹಾಕಲಾಗುತ್ತದೆ. ಇದಕ್ಕೆ ಅಂದಾಜು ಲೋಡ್‌ಗೆ 4 ಸಾವಿರ ರೂ.ನಿಂದ 5 ಸಾವಿರ ರೂ.ವರೆಗೆ ವೆಚ್ಚ ತಗಲುತ್ತದೆ. ಇದನ್ನು ಬಳಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತಿದೆ. ಫಸಲಿನ ಗುಣಮಟ್ಟ ಕಾಯ್ದುಕೊಳ್ಳಬಹುದಾಗಿದೆ.

ಇಂದಿನ ದಿನಗಳಲ್ಲಿ ಕಾರ್ಮಿಕರ ಸಮಸ್ಯೆ ಮಿತಿಮೀರಿದ್ದು, ನಾವೇ ಕಾರ್ಮಿಕರಾಗಿ ದುಡಿಯುತ್ತಿರುವುದರಿಂದ ಕೃಷಿ ಫಸಲು ಸುಲಲಿತವಾಗಿ ಬೆಳೆದು ಕೈಗೂಡುತ್ತಿದೆ ಎನ್ನುತ್ತಾರೆ ಅವರು. ಕೆಲವೊಮ್ಮೆ ಕೃಷಿ ಫಸಲು ಅರ್ಥಿಕ ನಷ್ಟಕ್ಕೀಡಾಗಿದ್ದರೂ ನಿತ್ಯ ಛಲ ಬಿಡದೆ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಪಾಲಕರಿಂದ ಬಳುವಳಿಯಾಗಿ ಪಡೆದ ಭೂಮಿ ಮತ್ತು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ.

ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ, ಕಾಡಾನೆ ಸೇರಿದಂತೆ ವನ್ಯಪ್ರಾಣಿಗಳ ಹಾವಳಿ, ಇಳುವರಿ ಕುಂಠಿತ, ಬೆಲೆಯ ಏರುಪೇರುಗಳಿಂದ ಲಾಭ, ನಷ್ಟವನ್ನು ಅನುಭವಿಸುವುದನ್ನು ತಪ್ಪಿಸಲು ಅಲ್ಪಕಾಲದ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯಲ್ಲಿ ಉಂಟಾಗುವ ಲಾಭ, ನಷ್ಟದ ಏರುಳಿತಗಳನ್ನು ಸರಿದೂಗಿಸಿಕೊಳ್ಳಬಹುದಾಗಿದೆ. ಅಡಿಕೆರ ಶಾಂತಪ್ಪ ಕೃಷಿಕರು ಕೃಷಿ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿರುವ ಸಹೋದರರು ಇಲಾಖೆಯಲ್ಲಿ ದೊರೆಯುವ ಸಾವಯವ ಗೊಬ್ಬರ, ಜೈವಿಕ ಗೊಬ್ಬರಗಳು ಹಾಗೂ ವಿವಿಧ ಯಂತ್ರೋಪಕರಣಗಳನ್ನು ಇಲಾಖೆಯಿಂದ ಪಡೆದುಕೊಂಡಿರುವುದಲ್ಲದೆ ನಿರಂತವಾಗಿ ಭೇಟಿ ನೀಡಿ ಸವಲತ್ತು ಮಾಹಿತಿಗಳನ್ನು ಪಡೆದುಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡು ಆದಾಯವನ್ನು ಕಂಡುಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿರುವ ಕೃಷಿಕರಿಗೂ ಇಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಅವರಿಗೂ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ಪಿ.ಎಸ್.ಬೋಪಯ್ಯ ನಿವೃತ್ತ ಪ್ರಭಾರ ಕೃಷಿ ಅಧಿಕಾರಿ, ಸುಂಟಿಕೊಪ್ಪ