ಜಿಲ್ಲೆ

ವಿದ್ಯಾಸಂಸ್ಥೆಗೆ 23 ಸೆಂಟ್ಸ್ ಭೂದಾನಗೈದ ಸೋದರರು

ಉಪ್ಪಿನಂಗಡಿ: ವಿದ್ಯಾ ಸಂಸ್ಥೆಯೊಂದಕ್ಕೆ ತಾನು ಈಗಾಗಲೇ ದಾನವಾಗಿ ನೀಡಿದ್ದ ಭೂಮಿ ಸಾಲದೆಂದು ಹೆಚ್ಚುವರಿಯಾಗಿ 23 ಸೆಂಟ್ಸ್ ಭೂಮಿಯನ್ನು ಮತ್ತೆ ದಾನವಾಗಿ ನೀಡುವ ಮೂಲಕ ಸಹೋದರರಿಬ್ಬರು ಮಾದರಿಯಾಗಿದ್ದಾರೆ.

ಉಪ್ಪಿನಂಗಡಿಯಲ್ಲಿ ಸಂಸ್ಕಾರ ಶಿಕ್ಷಣ ನೀಡುವ ಸಲುವಾಗಿ ಶಿಶು ಮಂದಿರವೊಂದರ ಸ್ಥಾಪನೆಗೆ ಭೂಮಿಯ ಕೊರತೆ ಕಂಡುಬಂದಾಗ ಉದ್ಯಮಿಗಳಾದ ಗೋವಿಂದ ಭಟ್ ಹಾಗೂ ಕೃಷ್ಣಾನಂದ ಭಟ್ ಸಹೋದರರಿಬ್ಬರು 5 ಸೆಂಟ್ಸ್ ಭೂಮಿಯನ್ನು ದಾನಪತ್ರದ ಮೂಲಕ ನೀಡಿದ್ದರು. ಈ ಭೂಮಿಯಲ್ಲಿ ತಲೆ ಎತ್ತಿದ್ದ ಶ್ರೀ ಮಾಧವ ಶಿಶು ಮಂದಿರದ ಕಾರ್ಯಚಟುವಟಿಕೆಗಳಿಗೆ ಸ್ಥಳಾವಕಾಶದ ಕೊರತೆ ಕಂಡು ಹೆಚ್ಚುವರಿಯಾಗಿ 23 ಸೆಂಟ್ಸ್ ಭೂಮಿಯನ್ನು ಶಿಶು ಮಂದಿರಕ್ಕೆ ದಾನವಾಗಿ ನೀಡಿದ್ದು, ಜುಲೈ 14ರಂದು ಪುತ್ತೂರು ರಿಜಿಸ್ಟಾರ್ ಕಚೇರಿಯಲ್ಲಿ ಶಿಶು ಮಂದಿರದ ಮಾತೃ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಕ್ಕೆ ದಾನಪತ್ರ ಹಸ್ತಾಂತರ ಮಾಡಿದರು.

ಈ ಹಿಂದೆ ಇಲ್ಲಿನ ಶ್ರೀರಾಮ ಶಾಲೆಯ ನಿರ್ಮಾಣ ಸಂದರ್ಭದಲ್ಲೂ ಇದೇ ಸಹೋದರರು 2 ಎಕರೆ ಭೂಮಿ ನೀಡಿದ್ದು, ಶಾಲೆಗೆ ಹೆಚ್ಚುವರಿ ಭೂಮಿ ಅಗತ್ಯತೆ ಕಂಡುಬಂದಾಗ ಒಂದು ಕರೆ ಭೂಮಿಯನ್ನು ಮಾರುಕಟ್ಟೆ ಧಾರಣೆಗಿಂತ ಕಡಿಮೆ ಬೆಲೆಗೆ ನೀಡಿ ಪ್ರೋತ್ಸಾಹಿಸಿದ್ದರು.

ದೇವರು ನಮಗೇನು ಕೊಟ್ಟಿದ್ದಾನೋ ಅದರ ಕಿಂಚಿತ್ ಭಾಗವನ್ನು ದೇವರಿಗೆ ಅರ್ಥಾತ್ ಸಮಾಜಕ್ಕೆ ಕೊಟ್ಟಿದ್ದೇವೆ ಅಷ್ಟೇ. ವಿವೇಕಾನಂದ ವಿದ್ಯಾವರ್ಧಕ ಸಂಘಅದನ್ನು ಸ್ವೀಕಾರ ಮಾಡಿ ಸದ್ಬಳಕೆ ಮಾಡುತ್ತಿರುವುದಕ್ಕೆ ಧನ್ಯತಾ ಭಾವವಿದೆ. ಗೋವಿಂದ ಭಟ್, ಸ್ಥಳ ದಾನಿ