ಜಿಲ್ಲೆ

ಉಕ್ಕಿನ ಸೇತುವೆಗೆ ಇನ್ನಿಲ್ಲ ರಕ್ಷಣೆ! : ಮುರಿದು ಬಿದ್ದ ತಡೆಬೇಲಿ: ಮುಂಜಾಗ್ರತೆ ವಹಿಸದಿದ್ದರೆ ಅಪಾಯ ನಿಶ್ಚಿತ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಪಾಣೆಮಂಗಳೂರಿನ ಹಳೆಯ ಉಕ್ಕಿನ ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರ ತಡೆಗಟ್ಟಿ, ಸೇತುವೆಯನ್ನು ರಕ್ಷಿಸುವ ಉದ್ದೇಶದಿಂದ ಅಳವಡಿಸಲಾಗಿದ್ದ ತಡೆಬೇಲಿ ಮುರಿದು ಬಿದ್ದಿದೆ.

ಕಳೆದ ಕೆಲವು ದಿನಗಳಿಂದ ತಡೆಬೇಲಿಯ ಆಧಾರಸ್ತಂಭದ ಬುಡ ಕಳಚಿ, ಅಪಾಯಕಾರಿಯಾಗಿ ವಾಲಿ ನಿಂತಿದ್ದು, ತಡೆಬೇಲಿಯನ್ನು ತೆರವುಗೊಳಿಸದ ಕಾರಣ ಮಂಗಳವಾರ ಬೆಳಗ್ಗೆ ಮೀನು ಸಾಗಾಟದ ಪಿಕಪ್ ವಾಹನವನ್ನು ನುಗ್ಗಿಸುವ ರಭಸಕ್ಕೆ ಗುದ್ದಿ ಮೊದಲೇ ವಾಲಿ ನಿಂತಿದ್ದ ತಡೆಬೇಲಿಗೆ ಹಾನಿಯಾಗಿ ಮುರಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಭಾನುವಾರ ಸಂಜೆ ಪುರಸಭಾಧ್ಯಕ್ಷ ವಾಸು ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪುರಸಭಾಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳದೆ ಮೀನಮೀಷ ಎಣಿಸಿದ ಪರಿಣಾಮ ವಾಹನ ಡಿಕ್ಕಿಯಾಗಿ ತಡೆಬೇಲಿ ಮುರಿದು ಬೀಳುವಂತಾಗಿದೆ. ಇದರಿಂದಾಗಿ ಒಂದು ಪಾರ್ಶ್ವದಲ್ಲಿ ತಡೆಬೇಲಿ ತೆರವಾಗಿದ್ದು, ಭಾರಿ ವಾಹನಗಳೆಲ್ಲ ಸಂಚರಿಸಿ ಇನ್ನೊಂದು ಭಾಗದಲ್ಲಿರುವ ತಡೆಬೇಲಿಗೆ ಸಿಲುಕಿಕೊಳ್ಳುವ ಆತಂಕ ಸೃಷ್ಟಿಯಾಗಿದೆ.

ಸ್ಮಾರಕವಾಗಿ ರಕ್ಷಣೆ ಬೇಡಿಕೆ: 1914ರಲ್ಲಿ ಬ್ರಿಟಿಷರಿಂದ ನಿರ್ಮಾಣಗೊಂಡಿದ್ದ ಉಕ್ಕಿನ ಸೇತುವೆ ಶತಮಾನ ಪೂರೈಸಿದ್ದು, ಅದನ್ನು ಸ್ಮಾರಕವಾಗಿ ರಕ್ಷಿಸಬೇಕು ಎನ್ನುವ ಬೇಡಿಕೆ ಇದೆ. ಈ ಕಾರಣಕ್ಕಾಗಿಯೇ ಈ ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸುವ ಉದ್ದೇಶದಿಂದ ಸೇತುವೆಯ ಎರಡು ಪಾರ್ಶ್ವಗಳಲ್ಲಿ ಲಕ್ಷಾಂತರ ರೂ. ವ್ಯಯಿಸಿ ತಡೆಬೇಲಿಗಳನ್ನು ನಿರ್ಮಿಸಲಾಗಿದೆ. ಭಾರಿ ವಾಹನಗಳನ್ನು ನಿಷೇಧಿಸಿರುವ ಬಗ್ಗೆ ಮುಖ್ಯವೃತ್ತದ ಬಳಿ ಯಾವುದೇ ಸೂಚನಾ ಫಲಕಗಳು ಇಲ್ಲದೆ ಇರುವುದರಿಂದ ಅಲ್ಲಿಯವರೆಗೆ ಹೋದ ವಾಹನಗಳು ತಡೆಬೇಲಿಯನ್ನು ನುಗ್ಗಿಸಿ ಸಂಚರಿಸುವ ಭರದಲ್ಲಿ ತಡೆಬೇಲಿಗೆ ಸಿಕ್ಕಿ ಹಾಕಿಕೊಳ್ಳುತ್ತಿವೆ. ನಿಯಮ ಮೀರುವ ಇಂತಹ ವಾಹನಗಳ ವಿರುದ್ಧ ಪುರಸಭೆಯಾಗಲಿ, ಸಂಚಾರಿ ಪೊಲೀಸರಾಗಲಿ ದಂಡ ಅಥವಾ ಕಾನೂನು ಕ್ರಮ ಕೈಗೊಳ್ಳದಿರುವುದರಿಂದ ತಡೆಬೇಲಿಯಲ್ಲೂ ವಾಹನ ನುಗ್ಗಿಸಿ ಅದನ್ನು ಹಾನಿಗೊಳಿಸುವುದು ನಿರಾಂತಕವಾಗಿ ನಡೆಯುತ್ತಿವೆ. ಇನ್ನು ಮುಂದೆಯಾದರೂ ಪುರಸಭೆ ಮೀನಮೇಷ ಎಣಿಸದೆ ಸೇತುವೆಯನ್ನು ರಕ್ಷಿಸುವ ಉದ್ದೇಶದಿಂದ ಗಟ್ಟಿಮುಟ್ಟಾದ ತಡೆಬೇಲಿ ನಿರ್ಮಿಸಬೇಕು. ನಿಯಮ ಉಲ್ಲಂಸುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಎಚ್ಚರಿಸಿದ್ದ ವಿಜಯವಾಣಿ

ಸೇತುವೆ ರಕ್ಷಣೆಗೆ ಹಾಕಿದ್ದ ತಡೆಬೇಲಿಯನ್ನು ಮೀರಿ ಪಿಕಪ್, ಮತ್ತಿತರ ಗೂಡ್ಸ್ ವಾಹನಗಳು ನಿಯಮ ಉಲ್ಲಂಸಿ ಎಗ್ಗಿಲ್ಲದೆ ಸಂಚರಿಸಿದ ಪರಿಣಾಮ ತಡೆಬೇಲಿ ಹಿಗ್ಗಿಕೊಂಡು ಸ್ವಾಗತ ಕಮಾನಿನಂತಾಗಿತ್ತು. ತಡೆಬೇಲಿ ಆಧಾರಸ್ತಂಭಗಳು ಬುಡ ಕಳಚಿಕೊಂಡು ವಾಲಿ ನಿಂತು ಅಪಾಯಕಾರಿಯಾಗಿ ಪರಿಣಮಿಸಿತ್ತು. ಈ ಬಗ್ಗೆ ‘ವಿಜಯವಾಣಿ’ ಜೂನ್ 4ರ ಸಂಚಿಕೆಯಲ್ಲಿ ‘ಪ್ರಾಣ ಬಲಿಗಾಗಿ ಕಾಯುತ್ತಿದೆ ತಡೆಬೇಲಿ’ ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಅಪಾಯಕಾರಿ ತಡೆಬೇಲಿಯನ್ನು ತೆರವುಗೊಳಿಸಿ, ಗಟ್ಟಿಮುಟ್ಟಾದ ಹೊಸ ತಡೆಬೇಲಿ ಅಳವಡಿಸವಂತೆ ತಾಲೂಕಾಡಳಿತ ಹಾಗೂ ಪುರಸಭೆಯ ಅಧಿಕಾರಿ ವರ್ಗವನ್ನು ಎಚ್ಚರಿಸುವ ಪ್ರಯತ್ನ ನಡೆಸಿತ್ತು. ಈ ಬಗ್ಗೆ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್ ಪುರಸಭೆಯ ಕಿರಿಯ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.

ತಡೆಬೇಲಿಯೊಳಗೆ ವಾಹನ ನುಗ್ಗಿಸಿ ತಡೆಬೇಲಿಯನ್ನು ಮುರಿದು ಹಾಕಿರುವ ವಾಹನ ಚಾಲಕನ ಮೇಲೆ ಪ್ರಕರಣ ದಾಖಲಿಸಿ, ಅದರ ದುರಸ್ತಿ ವೆಚ್ಚವನ್ನು ಆತನಿಂದಲೇ ದಂಡ ರೂಪದಲ್ಲಿ ಪಡೆಯುವಂತೆ ಸಂಚಾರಿ ಪೊಲೀಸರಿಗೆ ತಿಳಿಸಿದ್ದೇನೆ. ವಾಸು ಪೂಜಾರಿ ಬಂಟ್ವಾಳ ಪುರಸಭಾ ಅಧ್ಯಕ್ಷ ಪಾಣೆಮಂಗಳೂರು ಉಕ್ಕಿನ ಸೇತುವೆ ರಕ್ಷಣೆಗೆ ಹಾಕಿದ್ದ ತಡೆಬೇಲಿ ಮುರಿದು ಹಾಕಿರುವ ಬಗ್ಗೆ ಮಂಗಳವಾರ ಬೆಳಗ್ಗೆ ನಡೆದ ಜಿಲ್ಲಾಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಳೆಗಾಲ ಮುಗಿಯುವವರೆಗೆ ಈ ಸೇತುವೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಕಳಪೆ ತಡೆಬೇಲಿ ಅಳವಡಿಸಿರುವ ಬಗ್ಗೆ ತಾಲೂಕುಮಟ್ಟದ ಪ್ರಾಕೃತಿಕ ವಿಕೋಪದ ಸಭೆಯಲ್ಲಿ ಪುರಸಭೆಯ ಕಿರಿಯ ಇಂಜಿನಿಯರ್ ಅವರನ್ನು ಪ್ರಶ್ನಿಸಲಾಗಿದೆ. ಅರ್ಚನಾ ಡಿ.ಭಟ್ ಬಂಟ್ವಾಳ ತಹಸೀಲ್ದಾರ್ https://www.vijayavani.net/gudali-puja-program https://www.vijayavani.net/environmental-awareness-programme