ಪ್ರೊ. ಕೆ.ವೆಂಕಟಗಿರಿ ಗೌಡರಿಂದ ವಿಶ್ವ ಖ್ಯಾತಿಯಾದ ಗ್ರಾಮ
ಬಹುಪಾಲು ಒಕ್ಕಲಿಗರೇ ನೆಲೆಸಿರುವ ಗ್ರಾಮ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಬೈರಾಪಟ್ಟಣ ಚನ್ನಪಟ್ಟಣ ತಾಲೂಕಿನ ದೊಡ್ಡ ಗ್ರಾಮಗಳಲ್ಲೊಂದು. ಕೇವಲ ವಿಸ್ತಾರದಲ್ಲಷ್ಟೇ ಅಲ್ಲದೆ, ವಿಶ್ವಕ್ಕೆ ಶ್ರೇಷ್ಠ ಅರ್ಥಶಾಸ್ತ್ರಜ್ಞರನ್ನು ನೀಡಿರುವ ಹೆಗ್ಗಳಿಕೆ ಗ್ರಾಮಕ್ಕಿದೆ.
ಗ್ರಾಮದಲ್ಲಿ ಸರ್ವಜನಾಂಗಗಳು ಸಹಬಾಳ್ವೆಯಿಂದ ನೆಲೆಸಿದ್ದಾರೆ. ಗ್ರಾಮ ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಛಾಪು ಮೂಡಿಸಿದೆ. ಈ ಹಿಂದೆ ಭೈರೋಜಿ ಎಂಬ ದೊರೆ ಆಳ್ವಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮವನ್ನು ಭೈರೋಜಿಪಟ್ಟಣ ಎನ್ನಲಾಗುತ್ತಿತಂತೆ. ಕಾಲಕ್ರಮೇಣ ಅದು ಬೈರಾಪಟ್ಟಣವಾಗಿದೆೆ ಎನ್ನಲಾಗುತ್ತಿದೆ. ಮತ್ತೊಂದೆಡೆ, ಹೈದರಾಲಿ ಕಡೆಯ ಸೈನಿಕರು ಬೈರನಾಯಕ ಎಂಬುವವನನ್ನು ಗ್ರಾಮದ ಬಳಿ ಕೊಂದ ಕಾರಣದಿಂದ ಗ್ರಾಮಕ್ಕೆ ಬೈರಾಪಟ್ಟಣ ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ.
ಗ್ರಾಮದ ಕೀರ್ತಿ ಪಸರಿಸಿದ ಪ್ರೊೆಸರ್
moreಗ್ರಾಮದ ಹೆಸರನ್ನು ದೂರದ ಬ್ರಿಟನ್‌ವರೆಗೂ ಪಸರಿಸಿದ ಕೀರ್ತಿ ವಿಶ್ವ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲೊಬ್ಬರಾದ ಪ್ರೊ.ಕೆ.ವೆಂಕಟಗಿರಿಗೌಡರು. ಕೃಷ್ಣದಾಸೇಗೌಡ ಎಂಬುವರ ಪುತ್ರನಾಗಿ 1926ರಲ್ಲಿ ಜನಿಸಿದ ಪ್ರೊ.ಕೆ.ವೆಂಕಟಗಿರಿಗೌಡ ಅವರು ವಿಶ್ವದ ಏಳನೇ ಅರ್ಥಶಾಸ್ತ್ರಜ್ಞ ಎಂಬ ಹೆಸರು ಗಳಿಸಿದ್ದಾರೆ. ಮೈಸೂರು ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ.ಪದವಿ ಪಡೆದ ಅವರು ಬಳಿಕ ಲಂಡನ್‌ನ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪಿಎಚ್.ಡಿ ಪಡೆದರು. ಹಣದುಬ್ಬರ ಕುರಿತು ಸಂಶೋಧನೆ ಮಾಡುವಾಗಲೇ ಪ್ರತಿಷ್ಠಿತ ಲಾರ್ಡ್ ಲೆವರ್ ಹುಲ್ಮೆ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಭರವಸೆ ಹುಟ್ಟಿಸಿದರು. ಮೈಸೂರು ಹಾಗೂ ಬೆಂಗಳೂರು ವಿವಿಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಗೌಡರು, ಮಾಜಿ ಪ್ರಧಾನಿ ಹಾಗೂ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಸೇರಿ ಹಲವು ಪ್ರಮುಖರ ಸಹಪಾಠಿಯಾಗಿದ್ದರು. ದೇಶ ಹಾಗೂ ರಾಜ್ಯದ ಬಜೆಟ್‌ಗಳಲ್ಲಿ ಇವರ ಮಾರ್ಗದರ್ಶನ ಇರುತ್ತಿತ್ತು.
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಶೈಕ್ಷಣಿಕ ಗುರುವಾಗಿದ್ದ ಗೌಡರು, ಕೃಷ್ಣ ಅವರ ರಾಜಕೀಯ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರವಹಿಸಿದವರು. ನಿವೃತ್ತಿ ನಂತರ 1984ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತ ಬಳಿಕ 1991ರಲ್ಲಿ ಅದೇ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಆರ್. ಗುಂಡೂರಾವ್‌ಗೆ ಸೋಲಿನ ರುಚಿ ತೋರಿಸಿದರು. ಜತೆಗೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದ ಅವರು, ಸಂಘದ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದರು.
ದೊಂಬನ ಕೊಡುಗೆ
ಗ್ರಾಮದ ನೂರಾರು ಎಕರೆ ಜಾಗವನ್ನು ಗ್ರಾಮಸ್ಥರು ದೊಂಬನ ಕೊಡುಗೆ ಎಂದು ಕರೆಯುತ್ತಾರೆ. ಇದೇನು ದೊಂಬನ ಕೊಡುಗೆ? ಎಂದು ಹುಡುಕಿದರೆ, ಬಹಳ ವರ್ಷಗಳ ಹಿಂದೆ ಗ್ರಾಮಕ್ಕೆ ದೊಂಬರ ಕುಟುಂಬವೊಂದು (ಅಲೆಮಾರಿ) ಭಿಕ್ಷಾಟನೆಗೆ ಬಂದಿತಂತೆ. ಈ ವೇಳೆ ಗ್ರಾಮದ ಗೌಡರೊಬ್ಬರ ಮನೆಯಲ್ಲಿ ಭಿಕ್ಷೆ ಕೇಳುತ್ತಾರೆ. ಕೈಕಾಲು ಗಟ್ಟಿಯಾಗಿರುವಾಗ ಭಿಕ್ಷೆ ಬೇಡಲು ನಾಚಿಕೆಯಾಗುವುದಿಲ್ಲವೇ ಎಂದು ಗೌಡ ಹೀಯಾಳಿಸುತ್ತಾನಂತೆ. ಆಗ ಪವಾಡ ಮಾಡುವುದು ಹಾಗೂ ಭಿಕ್ಷೆ ಬೇಡುವುದು ನಮ್ಮ ಕುಲಕಸುಬು ಎಂದು ದೊಂಬ, ಗೌಡರ ಜತೆ ವಾದಿಸುತ್ತಾನೆ. ಆಗ ಗೌಡ ಯಾವುದಾದರೂ ಪವಾಡ ಮಾಡು ಎಂದು ಸವಾಲು ಹಾಕುತ್ತನಂತೆ. ಆಗ ದೊಂಬ ಕಂಕಳುಗಳಿಗೆ ಮೊರ (ಅಕ್ಕಿ ಸೋಸುವ ವಸ್ತು) ಕಟ್ಟಿಕೊಂಡು ಪಶ್ಚಿಮದಿಂದ ಪೂರ್ವಕ್ಕೆ ಹಾರುತ್ತಾ, ಕೊನೆಗೆ ಒಂದು ಜಾಗದಲ್ಲಿ ಬಿದ್ದು ರಕ್ತ ಕಾರಿ ಸಾಯುತ್ತಾನೆ. ಈ ಘಟನೆ ಬಳಿಕ ಈ ಸಾವಿಗೆ ನಾನೇ ಕಾರಣ ಎಂದು ಬಹಳ ನೋವು ಪಟ್ಟುಕೊಂಡ ಗೌಡ, ದೊಮ್ಮ ಹಾರಿಕೊಂಡು ಹೋದಷ್ಟು ಜಾಗವನ್ನು ಆ ಕುಟುಂಬಕ್ಕೆ ಕೊಡುಗೆಯಾಗಿ ನೀಡಿದರಂತೆ. ಬಳಿಕ ದೊಮ್ಮ ರಕ್ತಕಾರಿ ಸತ್ತ ಜಾಗದಲ್ಲಿ ಆತನ ನೆನಪಿಗೆ ಮಂಟಪ ಕಟ್ಟಿದರಂತೆ. ಇಂದಿಗೂ ಈ ಮಂಟಪವನ್ನು ಸರ್ಕಾರಿ ಶಾಲಾ ಆವರಣದಲ್ಲಿ ಕಾಣಬಹುದು.
ಉಯ್ಯಲೆ ಕಲ್ಲು
ಮೂರೂವರೆ ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಗ್ರಾಮದಲ್ಲಿ ಅಪರೂಪ ಎನ್ನಬಹುದಾದ ಉಯ್ಯಲೆ ಕಲ್ಲು ಮಾರಮ್ಮ ದೇವಸ್ಥಾನದ ಮುಂಭಾಗವಿದೆ. ಸುಮಾರು 25 ಅಡಿ ಎತ್ತರವುಳ್ಳ ಕಲ್ಲಿನ ಮೇಲ್ಭಾಗದಲ್ಲಿ ಎರಡು ಸರಪಳಿಗಳನ್ನು ಇಳಿಬಿಟ್ಟು, ಹಲಗೆಯನ್ನು ತೂಗು ಹಾಕಿ, ಸಮಭಾರವುಳ್ಳ ಇಬ್ಬರು ವ್ಯಕ್ತಿಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸರಪಳಿ ಹಿಡಿದುಕೊಂಡು ಉಯ್ಯಲೆ ಆಡಬಹುದು.
ಲಿಂಗರೂಪದ ಮಾರಮ್ಮ
ಗ್ರಾಮದಲ್ಲಿ ಪುರಾತನ ಹಿನ್ನೆಲೆಯುಳ್ಳ (ಚೋಳರ ಕಾಲದ) ಲಕ್ಷ್ಮೀ ಜನಾರ್ದನಸ್ವಾಮಿ ದೇವಸ್ಥಾನವಿದೆ. ಜತೆಗೆ ಮಾರಮ್ಮ, ಮಾಸ್ತಮ್ಮ, ಬಸವಣ್ಣ, ಬಾರಿಕಲ್ಲು ಆಂಜನೇಯ ಸೇರಿ ಹಲವು ದೇವಾಲಯಗಳಿವೆ. ಎಲ್ಲ ಮಾರಮ್ಮನ ದೇವಾಲಯಗಳಲ್ಲಿ ತಾಯಿಯ ವಿಗ್ರಹ ಇದ್ದರೆ, ಇಲ್ಲಿ ಮಾತ್ರ ಮಾರಮ್ಮ ತಾಯಿ ಲಿಂಗದ ರೂಪದಲ್ಲಿದೆ. ಇನ್ನು ಗ್ರಾಮದ ಯಾವುದೇ ಹಬ್ಬದಲ್ಲೂ ಮಾಂಸಾಹಾರ ಮಾಡುವುದಿಲ್ಲ.
ಚಿತ್ರದುರ್ಗ ನಾಯಕರ ವಂಶ ಮರೆ
ಚಿತ್ರದುರ್ಗ ನಾಯಕರ ವಂಶದ ಕುಡಿ ಇದೇ ಬೈರಾಪಟ್ಟಣ ನೆಲದಲ್ಲಿ ಮರೆಯಾಗಿರುವ ದುರಂತ ಕಥೆಯೂ ಇದೆ. ಹೈದರಾಲಿ ಚಿತ್ರದುರ್ಗವನ್ನು ವಶಪಡಿಸಿಕೊಂಡ ನಂತರ, ದೊರೆ ಮದಕರಿ ನಾಯಕ, ಅವನ ತಮ್ಮ ಪರಶುರಾಮಪ್ಪ ನಾಯಕ ಹಾಗೂ ದೊರೆಯ ಮಗ ಬಾಲಕ ಕುಮಾರ ಭರಮಪ್ಪ ನಾಯಕನನ್ನು ಬಂಧಿಸಲಾಯಿತಂತೆ, ಆ ಪೈಕಿ ಪರಶುರಾಮ ಹಾಗೂ ಭರಮಪ್ಪ ನಾಯಕನನ್ನು ಕಬ್ಬಾಳು ಬೆಟ್ಟದಲ್ಲಿ ಸೆರೆಹಾಕಿದರಂತೆ. ಒಂದು ರಾತ್ರಿ ಈ ಇಬ್ಬರು ತಪ್ಪಿಸಿಕೊಳ್ಳುವ ಯತ್ನ ನಡೆಸುತ್ತಾರೆ. ಹೈದರನ ಆದೇಶದಂತೆ ಅವರಿಬ್ಬರನ್ನು ಬೈರಾಪಟ್ಟಣದಲ್ಲಿನ ಆಲದ ಮರಕ್ಕೆ ನೇಣು ಹಾಕಿಸಲಾಯಿತಂತೆ. ನಾಯಕರ ವಂಶದ ಕುಡಿ ಇಲ್ಲಿ ಮರೆಯಾಯಿತು ಎಂದು ಇತಿಹಾಸಕಾರರು ದಾಖಲಿಸಿದ್ದಾರೆ.
ಸ್ಮರಣೀಯ ಗುಣವುಳ್ಳವರು
ಚಿಕ್ಕಮಗಳೂರು ಮೂಲದ ಕೆ.ಎಸ್.ಮಲ್ಲೇಗೌಡ ಎಂಬುವರು ಗ್ರಾಮದ ಹಾಲು ಶೀತಲೀಕರಣ ಕೇಂದ್ರದ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಲು ಆಗಮಿಸುತ್ತಾರೆ. ಗ್ರಾಮದಲ್ಲಿ ಕುಡಿಯುವ ನೀರಿನ ಸೌಲಭ್ಯ ಇಲ್ಲದಿರುವುದನ್ನು ಗಮನಿಸಿದ ಅವರು, ಅಂದಿನ ಕಾಲದಲ್ಲೇ (1973) ಒಂದು ಲಕ್ಷ ರೂ. ಹಣವನ್ನು ಸರ್ಕಾರಕ್ಕೆ ಠೇವಣಿ ಕಟ್ಟಿ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ, ಗ್ರಾಮದ ಎಲ್ಲ ಮನೆಗಳಿಗೂ ನೀರಿನ ನಳ ಸಂಪರ್ಕ ಕೊಡಿಸುತ್ತಾರೆ. ಇದರ ಉದ್ಘಾಟನೆಗೆ ಅಂದಿನ ಉಪರಾಷ್ಟ್ರಪತಿ ಜಿ.ಎಸ್.ಪಾಠಕ್ ಅವರನ್ನು ಗ್ರಾಮಕ್ಕೆ ಕರೆಸುತ್ತಾರೆ. ರಾಜ್ಯಸಭಾ ಸದಸ್ಯರು ಆಗಿದ್ದ ಕೆ.ಎಸ್.ಮಲ್ಲೇಗೌಡ ಅವರು ಜೀವಿತಾವಧಿಯ ಕೊನೆಯ ದಿನದವರೆಗೂ ಗ್ರಾಮದ ನಂಟು ಹೊಂದಿದ್ದರು. ಇವರನ್ನು ನಮ್ಮೂರಿನ ಆಧುನಿಕ ಭಗೀರಥ ಎಂದು ಸ್ಮರಿಸಿಕೊಳ್ಳುವ ಗ್ರಾಮಸ್ಥರು, ಊರ ಮುಂಭಾಗ ತಮ್ಮೂರಿನ ಹೆಮ್ಮೆಯ ಪುತ್ರ ಪ್ರೊ. ವೆಂಕಟಗಿರಿಗೌಡ ಅವರ ಜತೆಗೆ, ಇವರ ಪುತ್ಥಳಿ ನಿರ್ಮಿಸಿದ್ದಾರೆ. ಅವರ ಪುತ್ರಿ ಸಚ್ಚಿದೇವಿ ಮಲ್ಲೇಗೌಡ ಎಂಬುವರು, ತಂದೆಯ ನೆನಪಿನಲ್ಲಿ ಶುದ್ಧ ಕುಡಿಯುವ ನೀರಿನ ಯಂತ್ರ ನೀಡಿದ್ದಾರೆ. ಜತೆಗೆ, ಗ್ರಂಥಾಲಯ ಕಟ್ಟಿಕೊಟ್ಟಿದ್ದಾರೆ.