ಚಿಕ್ಕಮಗಳೂರು: ಅಂಗವಿಕಲರು ಸಾಮಾನ್ಯರಂತೆ ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಸರ್ಕಾರದ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಮತ್ತು ಎಚ್‌ಎಂಟಿಯಿಂದ ಶುಕ್ರವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಉಚಿತ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಗವಿಕಲರಿಗೆ ಸಂಘ ಸಂಸ್ಥೆಗಳು ಮತ್ತು ನಾಗರಿಕರು ಸಹಾಯ ಹಸ್ತ ಚಾಚಬೇಕು ಎಂದರು.
ಅಂಗವಿಕಲರು ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳದಂತೆ ಪಾಲಕರು ಮತ್ತು ಸಾರ್ವಜನಿಕರು ನೋಡಿಕೊಳ್ಳಬೇಕು. ಅವರಿಗೆ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಬೇಕು. ಮಾಸಾಶನದ ಮೊತ್ತ ಹೆಚ್ಚಿಸುವಂತೆ ಸರ್ಕಾರಕ್ಕೆ ಒತ್ತಡ ಹಾಕುವುದಾಗಿ ಭರವಸೆ ನೀಡಿದರು.
ನಗರಸಭೆ ಉಪಾಧ್ಯಕ್ಷ ಅಮೃತೇಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಾನಾಯಕ್, ತಾಪಂ ಇಒ ತಾರಾನಾಥ್, ಸಿಡಿಪಿಒ ಚರಣ್‌ರಾಜ್, ವಿಕಲಚೇತನರ ಅಧಿಕಾರಿ ಪೃಥ್ವಿರಾಜ್ ಇತರರಿದ್ದರು.