ಜಿಲ್ಲೆ

2028ಕ್ಕೆ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ತನ್ನಿ: ಕಾರ್ಯಕರ್ತರಿಗೆ ಸಚಿವ ದಿನೇಶ್ ಗುಂಡೂರಾವ್ ಕರೆ

ಮೈಸೂರು:  ಮುಂಬರುವ 2028ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ತರುವ ಮೂಲಕ ಇತಿಹಾಸ ಸೃಷ್ಟಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಭಾರತೀಯ ಯುವ ಕಾಂಗ್ರೆಸ್ ಹಾಗೂ ಕರ್ನಾಟಕ ಪ್ರದೇಶದ ಯುವ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿ ಕಾಂಗ್ರೆಸ್ ಯುವ ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ಮೂರು ದಿನಗಳ ಯುವ ಕ್ರಾಂತಿ ಬುನಾದಿ ಕಾರ್ಯಕಾರಿ ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಭಾನುವಾರ ಮಾತನಾಡಿದರು.

ಸರ್ಕಾರ ಹಾಗೂ ಜನರ ನಡುವೆ ಸೇತುವೆಯಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಬೇಕು. ಆ ಮೂಲಕ ಜನರ ವಿಶ್ವಾಸಗಳಿಸಿ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದು ಇತಿಹಾಸ ಸೃಷ್ಟಿಸಬೇಕು ಎಂದರು.

ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಸರ್ಕಾರ ಹಾಗೂ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು.

ಈಗ ಜಾತಿ ಗಣತಿ ಬಗ್ಗೆ ಜನರ ಅಭಿಪ್ರಾಯವೇನಿದೆ ಎಂಬುದನ್ನು ತಿಳಿದುಕೊಂಡು ವ್ಯತ್ಯಾಸವಿದ್ದರೆ ಪಕ್ಷದ ವರಿಷ್ಠರ ಗಮನಕ್ಕೆ ತನ್ನಿ. ವೈಯಕ್ತಿಕ ಅಭಿಪ್ರಾಯವೇನೆ ಇರಲಿ, ಪಕ್ಷ ಹಾಗೂ ಸರ್ಕಾರದ ತೀರ್ಮಾನಗಳಿಗೆ ಬದ್ಧವಾಗಿರಬೇಕು ಎಂದು ಸೂಚಿಸಿದರು.

ಜನರ ಮನಸ್ಸು ಗೆಲ್ಲುವುದೇ ಗುರಿಯಾಗಲಿ. ನಾಯಕತ್ವ ರೂಪುಗೊಳ್ಳುವುದು ಸಂಖ್ಯಾಬಲ ಹಾಗೂ ಹಣಬಲದಿಂದಲ್ಲ. ಎಷ್ಟು ಜನರನ್ನು ಒಳಗೊಂಡಿದ್ದೀರಿ, ಅವರಿಗೆ ಕಾಂಗ್ರೆಸ್ ಸಿದ್ಧಾಂತ ತಲುಪಿಸಿದ್ದೀರಾ ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿದರು.

ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಆರಂಭಿಸಿದಾಗ ಜನರನ್ನು ಸೇರಿಸುವುದು ಕಷ್ಟವೆಂದಿದ್ದರು. ಆದರೆ ಯಾತ್ರೆ ಅದ್ಭುತ ಯಶ ಕಂಡಿತು. ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರಿತ್ತು. ಇನ್ನು 30 ಕ್ಷೇತ್ರದಲ್ಲಿ ಗೆದ್ದಿದ್ದರೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುತ್ತಿದ್ದೆವು ಎಂದರು.

ಕೇಂದ್ರ ಸರ್ಕಾರದ ವೈಫಲ್ಯ:

ಕಾಶ್ಮೀರದ ಪಹಲ್ಗಾಮ್ ಘಟನೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯವಿದೆ. ಅದನ್ನು ವಿರೋಧಿಸಿದರೆ ಅದು ರಾಜಕೀಯವಾಗುತ್ತದೆ. ಹಾಗಾಗಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಸ್ಪಷ್ಟ ಅಭಿಪ್ರಾಯ ತಿಳಿದುಕೊಂಡು ಪ್ರತಿಕ್ರಿಯಿಸಿ ಎಂದು ತಿಳಿ ಹೇಳಿದರು.

ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿಗರು ಸತ್ಯ ತಿರುಚಿ ಸುಳ್ಳು ಹೇಳುತ್ತಾರೆ. ಅವರನ್ನು ಎದುರಿಸಲು ಸಿದ್ಧತೆ ಅಗತ್ಯವಾಗಿದೆ. ಹಾಗಾಗಿ, ನಮ್ಮ ಪಕ್ಷದ ಸಿದ್ಧಾಂತ, ಪ್ರಸ್ತತ ಘಟನೆ, ಹಿಂದಿನ ಇತಿಹಾಸವನ್ನು ಚೆನ್ನಾಗಿ ತಿಳಿದುಕೊಳ್ಳಿ ಎಂದರು.