ಜಿಲ್ಲೆ

ಎಲ್ಲ ಜನಾಂಗದವರನ್ನು ಪಕ್ಷಕ್ಕೆ ಕರೆತನ್ನಿ: ಕಾರ್ಯಕರ್ತರಿಗೆ ವಿಜಯ್ ನಾಯಕ ಸಲಹೆ

ಮೈಸೂರು: ಎಲ್ಲ ಜನಾಂಗದವರನ್ನು ಪಕ್ಷಕ್ಕೆ ಕರೆತರುವ ಮೂಲಕ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡಗಳ ವಿಭಾಗದ ಅಧ್ಯಕ್ಷ ವಿಜಯ್ನಾಯಕ ಹೇಳಿದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಇಂದಿರಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಪರಿಶಿಷ್ಟ ಪಂಗಡಗಳ ವಿಭಾಗದ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೈಸೂರು ಕಾಂಗ್ರೆಸ್ ಶಿಸ್ತಿಗೆ ಹೆಸರುವಾಸಿಯಾಗಿದೆ. ಬೇರೆ, ಬೇರೆ ಜಾತಿ, ಜನಾಂಗ ಬೇರೆಬೇರೆ ಹೆಸರಿನಲ್ಲಿ ಜನ ಇದ್ದಾರೆ. ಅವರನ್ನು ಪಕ್ಷಕ್ಕೆ ತಂದು ಸರ್ಕಾರ ಅವರಿಗೆ ನೀಡುತ್ತಿರುವ ಸವಲತ್ತುಗಳನ್ನು ಮನಮುಟ್ಟುವಂತೆ ಹೇಳಬೇಕಾಗಿದೆ. ಕಾರ್ಯಕರ್ತರು ಈ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.
ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ಶಕ್ತಿ ಏನು ಎಂಬುದನ್ನು ನಾವು ತೋರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಯಾರೇ ಅದರೂ ಕೆಲಸ ಮಾಡದಿದ್ದಲ್ಲಿ ಬದಲಾವಣೆಗೆ ತಯಾರಾಗಿರಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ ಅಧ್ಯಕ್ಷ, ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನಮ್ಮ ಸಮುದಾಯಕ್ಕೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಿ ಅಧಿಕಾರ ಕೊಟ್ಟಿದೆ. 15 ಜನ ಶಾಸಕರಿದ್ದು, ಮುಂದಿನ ದಿನಗಳಲ್ಲಿ ಒಂದು ಎಂಎಲ್ಸಿ ಸ್ಥಾನ ನೀಡಿದರೆ ನಮ್ಮ ಸಮುದಾಯ ಮತ್ತಷ್ಟು ಸದೃಢವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ಪ್ರತಿಮೆಯನ್ನು ವಿಧಾನ ಸೌಧದಲ್ಲಿ ಸ್ಥಾಪಿಸಿದ ಮೊದಲಿಗರಾಗಿದ್ದಾರೆ. ಇದು ನಮ್ಮ ಸಮಾಜದ ಗೌರವವನ್ನು ಹೆಚ್ಚಿಸಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಮ್ಮ ಸಮಾಜಕೆ ಅನ್ಯಾಯವಾಗಿತ್ತು. ಈಗ ನಮ್ಮ ಸರ್ಕಾರದಲ್ಲಿ ಅದರ ನಿವಾರಣೆ ಆಗುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನಿಗಮ ಮಂಡಳಿಗಳಲ್ಲಿ ನಮ್ಮ ಸಮಾಜಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಿ ನಮ್ಮ ಸಮುದಾಯವನ್ನು ಪರಿಗಣಿಸಬೇಕು ಎಂದು ಹೇಳಿ ಪರಿಶಿಷ್ಟ ಪಂಗಡದ ಬೃಹತ್ ಸಮಾವೇಶ ಮಾಡಲು ಚಿಂತನೆ ನಡೆಸಲಾಗಿದೆ. ಅದರ ಮುಖಾಂತರ ನಮ್ಮ ಸಮುದಾಯವೂ ಸರ್ಕಾರದ ಗಮನ ಸೆಳೆಯಲು ಮುಂದಾಗಿದೆ. ಇಲ್ಲಿಯವರೆಗೆ ಅಧಿಕಾರಗಳನ್ನು ಕೊಟ್ಟು ಸಮುದಾಯವನ್ನು ಮೇಲೆತ್ತಲು ಕಾರಣಭೂತರಾದ ಕಾಂಗ್ರೆಸ್‌ಗೆ ನಾವು ಸದಾ ಋಣಿಯಾಗಿರಬೇಕು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ಪರಿಶಿಷ್ಟ ಪಂಗಡದ ಒಳಗೆ ಇರುವ ಸಣ್ಣ ಸಣ್ಣ ಸಮುದಾಯವನ್ನು ಅಭಿವೃದ್ಧಿಪಡಿಸಲು ಅವರಿಗೆ ಆರ್ಥಿಕ ಸಾಮಾಜಿಕ ಮತ್ತು ರಾಜಕೀಯ ಅಧಿಕಾರವನ್ನು ಕೊಡಿಸಿಕೊಡುವಲ್ಲಿ ಪರಿಶಿಷ್ಟ ಪಂಗಡದ ವಿಭಾಗದ ಕಾರ್ಯ ಹೆಚ್ಚಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಆದೇಶ ಮೇರೆಗೆ ನಿಷ್ಕ್ರಿಯಗೊಂಡಿರುವ ಬ್ಲಾಕ್ ಅಧ್ಯಕ್ಷರು ಮತ್ತು ಮುಂಚೂಣಿ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳನ್ನು ಬದಲಾವಣೆ ಮಾಡಬೇಕು. ಮುಂಬರುವ ಜಿಪಂ, ತಾಪಂ ಚುನಾವಣೆಗಳಿಗೆ ಸಂಬಂಧಿಸಿದಂತೆ ಸರಣಿ ಸಭೆಗಳನ್ನು ಶೀಘ್ರ ಆರಂಭಿಸಲಾಗುವುದು ಎಂದು ಹೇಳಿದರು.
ನೂತನ ಅಧ್ಯಕ್ಷ ಮಹೇಶ್ ಅವರಿಗೆ ಪಕ್ಷದ ಬಾವುಟ ನೀಡಿ ಅಧಿಕಾರ ಹಸ್ತಾಂತರಿಸಲಾಯಿತು. ಜಂಗಲ್ ಲಾಡ್ಜ್ ಆ್ಯಂಡ್ ರೆಸಾರ್ಟ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಲತಾಸಿದ್ದಶೆಟ್ಟಿ, ನಜರ್‌ಬಾದ್ ನಟರಾಜ್, ನರೇಂದ್ರಕುಮಾರ್, ಅರುಣ್‌ಕುಮಾರ್ ಇತರರು ಇದ್ದರು.