ಸುಗುಣೇಂದ್ರ ತೀರ್ಥರ ಆಶೀರ್ವಚನ
ಬೃಹತ್ ಗೀತೋತ್ಸವದ ಮಂಗಳೋತ್ಸವ
ಭಗವದ್ಗೀತೆಯ ಮೂಲಕ ಭಗವಂತ ಶ್ರೀಕೃಷ್ಣ ನೀಡಿದ ಸಂದೇಶ ಇಡೀ ಜಗತ್ತಿಗೆ ಸಂಬಂಧಿಸಿದ ವಿಚಾರವಾಗಿದೆ. ತ್ರೈಕಾಲಿಕವಾದ ಹಾಗೂ ಅಜರಾಮರವಾದುದಾಗಿದೆ. ಇದನ್ನು ಎಲ್ಲರೂ ಪರಿಪಾಲನೆ ಮಾಡುವಂತಾಗಬೇಕು. ಈ ದೃಷ್ಟಿಯಿಂದಲೇ ಉಡುಪಿಯಲ್ಲಿ ಬೃಹತ್ ಗೀತೋತ್ಸವ ಆಯೋಜಿಸಲಾಗಿತ್ತು ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದಿಂದ ನ.20ರಿಂದ ಡಿ.28ರ ವರೆಗೆ ಮಂಡಲ ಪರ್ಯಂತ (40 ದಿನ) ನಡೆದ ಬೃಹತ್ ಗೀತೋತ್ಸವದ ನಿಮಿತ್ತ ಭಾನುವಾರ ಆಯೋಜಿಸಿದ್ದ ಮಂಗಳೋತ್ಸವ ಹಾಗೂ ಗೀತಾ ಜ್ಞಾನ ದೀಪೋತ್ಸವದ ಸಮಾರೋಪವನ್ನು ತೊಟ್ಟಿಲಿನಲ್ಲಿರುವ ಬಾಲಕೃಷ್ಣನನ್ನು ತೂಗುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಉಡುಪಿಯ ರಾಜಾಂಗಣದಲ್ಲಿ ಗೀತಾ ಜ್ಞಾನ ದೀಪೋತ್ಸವವನ್ನು ಸುಗುಣೇಂದ್ರ ಶ್ರೀ ಉದ್ಘಾಟಿಸಿದರು. ಸುಶ್ರೀಂದ್ರ ಶ್ರೀ, ನಟ ಉಪೇಂದ್ರ, ಯಶ್ಪಾಲ್ ಸುವರ್ಣ, ನ್ಯಾ. ಪಿ.ಎಸ್. ದಿನೇಶಕುಮಾರ್ ಇತರರಿದ್ದರು.
ಜಡ್ಜಮೆಂಟ್ ಪುಸ್ತಕ
ಚತುರ್ಥ ವಿಶ್ವಗೀತಾ ಪರ್ಯಾಯದ ಮೊದಲ ಬೃಹತ್ ಗೀತೋತ್ಸವದ ಸಮರ್ಪಣೆ ಮಾಡಲಾಗಿದೆ. ಕಾಂಚಿ ಶ್ರೀಗಳಿಂದ ಉದ್ಘಾಟನೆಯಾಗಿದ್ದ ಈ ಕಾರ್ಯಕ್ರಮವು ನ್ಯಾಯಾಧೀಶರ ಉಪಸ್ಥಿಯಲ್ಲಿ ಶ್ರೀಕೃಷ್ಣನಿಗೆ ಸಮರ್ಪಣೆ ಆಗುತ್ತಿದೆ. ಇದರರ್ಥವೇನೆಂದರೆ ಭಗವದ್ಗೀತೆ ಎನ್ನುವುದು 'ಫೈನಲ್ ಜಡ್ಜಮೆಂಟ್'ಎನ್ನುವುದನ್ನು ರುಜುವಾತು ಮಾಡಿದೆ ಎಂದರು.
ಶ್ರೀಕೃಷ್ಣ ಮುಖ್ಯಪ್ರಾಣ ಪಂಚಾಂಗ ಬಿಡುಗಡೆ
ಪರ್ಯಾಯ ಪುತ್ತಿಗೆ ಮಠದ ಪ್ರಧಾನ ಪಂಚಾಂಗವಾದ ಶ್ರೀಕೃಷ್ಣ ಮುಖ್ಯಪ್ರಾಣ ಹೆಸರಿನ ವಿಶ್ವಾವಸು ನಾಮ ಸಂವತ್ಸರದ ಪಂಚಾಂಗವನ್ನು ಶ್ರೀಗಳು ಬಿಡುಗಡೆ ಮಾಡಿದರು. 12 ಬಗೆಯ ಕಲಾ ಸಂಸ್ಕೃತಿಯೊಂದಿಗೆ ಗೀತಾ ಜ್ಞಾನ ದೀಪೋತ್ಸವ ಸಮರ್ಪಣೆಗೊಂಡಿತು. ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಚಿತ್ರನಟ ಉಪೇಂದ್ರ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿಯ ಉದ್ಯಮಿಗಳಾದ ಮನೋಹರ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಇತರರು ಉಪಸ್ಥಿತರಿದ್ದರು.
ಮಠದ ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ದಿವಾನ ನಾಗರಾಜ್ ಆಚಾರ್ಯ, ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್, ರಮಣ ಆಚಾರ್ಯ, ಮಹಿತೋಷ್ ಆಚಾರ್ಯ, ರವೀಂದ್ರ ಆಚಾರ್ಯ ಇತರರು ಸಹಕರಿಸಿದರು. ಅಮೆರಿಕದಲ್ಲಿ ಸಾಫಲ್ಯ ಮ್ಯೂಸಿಕ್ ಅಕಾಡೆಮಿ ಮೂಲಕ ದಾಸ ಸಾಹಿತ್ಯ ಪ್ರಸಾರ ಮಾಡುತ್ತಿರುವ ದಿವ್ಯಾ ರಮೇಶ್ ಪ್ರಾರ್ಥಿಸಿದರು. ವಿದ್ವಾನ್ ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಗೀತಾ ಸಂದೇಶ ಪ್ರಚಾರದಿಂದ ಜಗತ್ತಿಗೆ ಒಳಿತು
ಸಮಾಜದ ಹಾಗೂ ದೇವರ ಸೇವೆ ಮಾಡಬೇಕೆಂದು ಶ್ರೀಕೃಷ್ಣ ಸಂದೇಶ ನೀಡಿದ್ದಾನೆ. ಅದರಂತೆ ಮಧ್ವಾಚಾರ್ಯರು ಜನತೆಯ ಸೇವೆಯ ಮೂಲಕ ಜನಾರ್ದನನ ಸೇವೆ ಮಾಡಬೇಕೆಂದು ಸಂದೇಶ ನೀಡಿದ್ದಾರೆ. ಹೀಗಾಗಿ ಭಗವದ್ಗೀತೆ ಎಲ್ಲರಿಗೂ ಸಂಬಂಧಪಟ್ಟಿದ್ದು ಎನ್ನುವುದನ್ನು ಪ್ರಚಾರ ಮಾಡಲೆಂದೇ ಕೋಟಿ ಗೀತಾ ಲೇಖನ ಯಜ್ಞ ಮಾಡಲಾಗುತ್ತಿದೆ. ವಿದೇಶಿಗರು, ಮುಸ್ಲಿಂ, ಕ್ರೈಸ್ತ ಸಮುದಾಯದವರೂ ಸಹ ತೊಡಗಿಕೊಂಡಿದ್ದಾರೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಸ್ವಯಂ ಸಾನ್ನಿಧ್ಯವಿದ್ದು, ಚಿನ್ಮಯ ರೂಪದಲ್ಲಿ ನೆಲೆಸಿದ್ದಾನೆ. ಜನರಲ್ಲಿ ಶ್ರದ್ಧೆ ಎನ್ನುವುದು ಸುಪ್ತವಾಗಿದ್ದು, ಅದನ್ನು ಜಾಗೃತಗೊಳಿಸುವ ಕಾರ್ಯವಾದರೆ ಜಗಕ್ಕೆ ಒಳ್ಳೆಯದಾಗಲಿದೆ ಎಂದು ಸುಗುಣೇಂದ್ರ ಶ್ರೀ ತಿಳಿಸಿದರು.
ಪ್ರಪಂಚದ ವಿಸ್ಮಯ, ಚಮತ್ಕಾರದ ಗ್ರಂಥ
ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶಕುಮಾರ್ ಮಾತನಾಡಿ, 'ರೂಲ್ ಆಫ್ ಲಾ' ಎಂಬ ಕಾನೂನಿನ ಪ್ರಕಾರದಂತೆ ನ್ಯಾಯಾಲಯ ಕಲಾಪ ನಡೆಯುತ್ತದೆ. ಮಹಾಭಾರತದ ಒಂದು ಅಂಗವಾದ ಭಗವದ್ಗೀತೆಯನ್ನು 4 ವೇದಗಳಿಗೆ ಸಮಾನವಾದ ಪಂಚಮವೇದ ಎನ್ನುತ್ತಾರೆ. ಪ್ರಪಂಚದ 14 ಲೋಕಗಳಲ್ಲಿ ಉದ್ಭವಿಸುವ ಎಲ್ಲ ಪ್ರಕಾರದ ಪ್ರಶ್ನೆಗಳಿಗೆ ಭಗವದ್ಗೀತೆಯಲ್ಲಿ ಪರಿಹಾರವಿದೆ. ಇದೊಂದು ವಿಸ್ಮಯ ಮತ್ತು ಚಮತ್ಕಾರದ ಗ್ರಂಥ. ಪ್ರತಿಯೊಂದೂ ಸಹ ಸನಾತನ ಧರ್ಮದ ಆಧಾರದಲ್ಲಿಯೇ ನಡೆಯುತ್ತದೆ. ಇದನ್ನು ಅನೇಕರು ಒಪ್ಪದೇ ಇರಬಹುದು. ಆದರೆ, ಇದುವೇ ಜಾಗತಿಕ ಸತ್ಯ, ಜಾಗತಿಕ ಕಾನೂನು ಸಹ ಆಗಿದೆ. 1950ರ ನಂತರ ಸಂವಿಧಾನದ ಅಡಿ ರಚಿತವಾದ ಕಾನೂನು ಪರಿಪಾಲಿಸುತ್ತ, ಸನಾತನದಲ್ಲಿ ತಿಳಿಸಿದಂತೆ ಧರ್ಮ ಅನುಸರಿಸುತ್ತ ನಾವೆಲ್ಲರೂ ಸಾಗಬೇಕು. 'ಯತೋ ಧರ್ಮ; ಸ್ತತೋ ಜಯ;' ಎಂದು ಸುಪ್ರೀಂ ಕೋರ್ಟ್ನ ಮೇಲೆ ಬರೆದಿಡಲಾಗಿದೆ. 'ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ' ಎನ್ನುವುದು ಅದರ ತಾತ್ಪರ್ಯವಾಗಿದೆ ಎಂದರು.
ಶ್ರೀಕೃಷ್ಣನ ಸನ್ನಿಧಿಯಲ್ಲಿ ಶ್ರೀಕೃಷ್ಣ ಜಯಂತಿ ಆಚರಿಸುವಂತೆಯೇ ಭಗವದ್ಗೀತಾ ಜಯಂತಿಯನ್ನೂ ಮಾಡಬೇಕೆಂಬ ದೃಷ್ಟಿಯಿಂದ 40 ದಿನಗಳ ಕಾಲ ಗೀತೋತ್ಸವ ಆಚರಿಸಲಾಗಿದೆ. ಇದು ಕೃಷ್ಣ ಜಯಂತಿಯಷ್ಟೇ ಶ್ರೇಷ್ಠವಾದ ಆಚರಣೆಯಾಗಿದೆ.
| ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ