ಮಧುಗಿರಿ: ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು, ಶಿಕ್ಷಕರ ಕೆಲಸ ಪುಣ್ಯದ ಕೆಲಸ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ. ಶಿಕ್ಷಕರಿಗೆ ವಿವಿಧ ಕೆಲಸಗಳ ಒತ್ತಡವಿದ್ದು, ಅದನ್ನು ಪರಿಹರಿಸುವ ಕೆಲಸ ಮಾಡಲಾಗುವುದು. ದೇಶದಲ್ಲಿ ಪ್ರಸ್ತುತ 77ರಷ್ಟು ವಿದ್ಯಾವಂತರಿದ್ದು, ಮುಂದಿನ ದಿನಗಳಲ್ಲಿ 100ರಷ್ಟು ವಿದ್ಯಾವಂತರಾಗಬೇಕಾಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹೊಮ್ಮಿಸುವ ಕೆಲಸ ಮಾಡಬೇಕು. ಶಿಕ್ಷಕರು ಸಕಾರಣವಿಲ್ಲದೆ ಶಾಲೆಗಳಿಗೆ ತಡವಾಗಿ ಹೋಗಬಾರದು. ಇದರಿಂದ ಮಕ್ಕಳಿಗೆ ದ್ರೋಹ ಮಾಡಿದಂತಾಗುತ್ತದೆ ಎಂದರು.
ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಅನ್ನಭಾಗ್ಯ ಯೋಜನೆಯ ಅನುಕೂಲ ಪಡೆಯುತ್ತಿದ್ದಾರೆ. ಕ್ಷೇತ್ರದಲ್ಲಿ ಅನ್ನಭಾಗ್ಯ ಯೋಜನೆಯಡಿ 35 ಸಾವಿರ ಕ್ವಿಂಟಲ್ ಅಕ್ಕಿ ವಿತರಣೆಯಾಗುತ್ತಿದೆ. ಪಟ್ಟಣದಲ್ಲಿ ಉತ್ತಮ ವಾತಾವರಣವಿದ್ದು, ಈ ಹಿಂದೆ 15 ದಿನಕ್ಕೆ ಒಮ್ಮೆ ಜನತೆಗೆ ನೀರು ಪೋರೈಸಲಾಗುತ್ತಿತ್ತು. ಪ್ರಸ್ತುತ ಪ್ರತಿ ದಿವಸ ನೀರು ಪೂರೈಕೆಯಾಗುತ್ತಿದೆ. ಇದಕ್ಕೆ ಪುರಸಭೆ ಆಡಳಿತ ಮಂಡಳಿಯನ್ನು ಅಭಿನಂದಿಸುವುದಾಗಿ ತಿಳಿಸಿದರು.
ಡಿಡಿಪಿಐ ಮಾದವರೆಡ್ಡಿ ಮಾತನಾಡಿ, ಶಿಕ್ಷಕರಿಗೆ ಇರುವ ಗೌರವವನ್ನು ವಿದ್ಯಾರ್ಥಿಗಳ ಮೂಲಕ ಕಾಣಬಹುದು. ದೇಶದ ಬೆಳವಣಿಗೆ ಕಲಿಕಾ ಚಟುವಟಿಕೆಗಳಿಂದ ಮಾತ್ರ ಸಾಧ್ಯ. ಶಿಕ್ಷಕರು ನಿರಂತರವಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಪ್ರಸ್ತುತ ನಾವುಗಳು ಎಐ ತಂತ್ರಜ್ಞಾನಕ್ಕೆ ಪ್ರವೇಶ ಮಾಡುತ್ತಿದ್ದೇವೆ. ಪಠ್ಯದಲ್ಲಿ ಬದಲಾವಣೆಗಳಾಗುತ್ತಿದ್ದು, ಬದಲಾವಣೆಗೆ ತಕ್ಕಂತೆ ಮಕ್ಕಳ ಕಲಿಕೆಗೆ ಒತ್ತು ನೀಡಬೇಕು. ಶಿಕ್ಷಣ ನಿರಂತರ ಕಲಿಕೆ. ಅದೇ ರೀತಿ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಮಾನವೀಯ ಗುಣ ಬೆಳೆಸುವಂತಹ ಕಲಿಕೆ ನೀಡಬೇಕು ಎಂದರು.
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಉಂಟಾಗುತ್ತಿರುವ ಬಗ್ಗೆ ಮತ್ತು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಬಗ್ಗೆ ಚಿಂತನೆ ನಡೆಸಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಉತ್ತಮ ಫಲಿತಾಂಶಕ್ಕೆ ನಾಂದಿ ಹಾಡಬೇಕು ಎಂದರು.
ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್, ಉಪಾಧ್ಯಕ್ಷೆ ಸುಜಾತಾ ಶಂಕರ್ ನಾರಾಯಣ್, ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಬಿಇಒ ಹನುಮಂತರಾಯಪ್ಪ, ತಾಪಂ ಇಒ ಲಕ್ಷ್ಮಣ್, ಡಯಟ್ ಪ್ರಾಂಶುಪಾಲ ಗಂಗಾಧರ್, ಅಕ್ಷರ ದಾಸೋಹ ನಿರ್ದೇಶಕ ಚಿತ್ತಯ್ಯ, ಪ್ರಭಾರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ದೊಡ್ಡಯರಗಾಯ್ಯ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಪವನ್ ಕುಮಾರ್ ರೆಡ್ಡಿ, ಪಾವಗಡ ಬಿಇಒ ರೇಣುಕಮ್ಮ, ಶಿರಾ ಬಿಇಒ ಕೃಷ್ಣಪ್ಪ, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ, ಗೌರವಾಧ್ಯಕ್ಷ ಕೆ.ಟಿ. ಸಿದ್ದೇಶ್ವರ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯತಿಕುಮಾರ್ ಇತರರಿದ್ದರು.