ಕಂಪ್ಲಿ: ದೇವನಾಗುವುದೇ ಭಾರತೀಯ ಸಂಸ್ಕೃತಿಯ ಪರಮ ಗುರಿಯಾಗಿದ್ದು, ಪ್ರತಿಯೊಬ್ಬರೂ ಜ್ಞಾನಗಳಿಸುವಲ್ಲಿ ಜಾಗೃತರಾಗಬೇಕು ಎಂದು ಗದಗ-ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.
ಇಲ್ಲಿನ ಬಿಎಸ್‌ವಿ ಶಾಲಾ ಆವರಣದಲ್ಲಿ ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿ ಹಮ್ಮಿಕೊಂಡಿದ್ದ ವಿವೇಕ ಮಂಟಪ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನ್ಯೂಟನ್ ಸೇರಿದಂತೆ ಇತರ ವಿಜ್ಞಾನಿಗಳ ಆವಿಷ್ಕಾರಗಳೆಲ್ಲವೂ ವೇದಗಳಲ್ಲಿ ಅಡಗಿದ್ದು, ಭಾರತೀಯ ಪ್ರಾಚೀನ ಋಷಿಗಳ ಕೊಡುಗೆ ಮಹತ್ವದ್ದಾಗಿದೆ. ಪರಿಪೂರ್ಣ ಆತ್ಮಜ್ಞಾನದಿಂದ ಮೃತ್ಯು ಗೆಲ್ಲಲು ಸಾಧ್ಯ. ಪೌರುಷದಲ್ಲಿ ಎಲ್ಲ ಅಡಗಿದ್ದು ಪ್ರಪಂಚದ ಬದಲಾವಣೆ ನಮ್ಮ ನಿಜತ್ವದಲ್ಲಿ ಅಡಗಿದೆ. ಉಜ್ವಲ ಜೀವನಕ್ಕೆ ಆತ್ಮಜ್ಞಾನ ಅಗತ್ಯವಿದ್ದು, ತಪೋಬಲದಿಂದ ಆತ್ಮಜ್ಞಾನಗಳಿಸಬೇಕಿದೆ. ಒಳ ಮತ್ತು ಹೊರ ಪ್ರಕೃತಿ ಗೆಲ್ಲಲು ಬೇಕಾದ ಜ್ಞಾನ ಭಾರತೀಯ ಋಷಿ ಪರಂಪರೆಯ ಸಾಹಿತ್ಯದಲ್ಲಿದ್ದು ಅರ್ಥೈಸಿಕೊಳ್ಳಬೇಕಿದೆ ಎಂದರು.
ಗಾಯಕ ಪಂಚಾಕ್ಷರಿ ಕುಮಾರ್ ಭಕ್ತಿ ಗೀತೆ ಹಾಡಿದರು. ಮಹಮ್ಮದ್ ರಿಜ್ವಾನ್ ತಬಲಾ ಸಾಥ್, ಯುವರಾಜ ಹಾರ‌್ಮೋನಿಯಂ ನುಡಿಸಿದರು. ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿ ತಾಲೂಕು ಸಂಚಾಲಕ ಅಮರೇಗೌಡ ಚಿಕ್ಕಜಾಯಿಗನೂರು, ಸಹ ಸಂಚಾಲಕ ಬಸವರಾಜ ಸಣಾಪುರ, ಜಿಲ್ಲಾ ಸಂಯೋಜಕ ಪ್ರಭುದೇವ ಕಪ್ಪಗಲ್, ಮುಖ್ಯಶಿಕ್ಷಕ ಎಸ್.ಶಾಮಸುಂದರರಾವ್ ಇತರರಿದ್ದರು.