ಅರವಿಂದ ಅಕ್ಲಾಪುರ ಶಿವಮೊಗ್ಗ
ಕಳೆದ ಮೂರ‌್ನಾಲ್ಕು ತಿಂಗಳಿನಿಂದ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದ ಹೊಸ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ಎಂಟು ವರ್ಷಗಳ ಹಿಂದೆ ರಾಯಣ್ಣ ಬ್ರಿಗೇಡ್ ಆರಂಭಕ್ಕೆ ಮುನ್ನುಡಿ ಬರೆದಿದ್ದ ಈಶ್ವರಪ್ಪ ಈಗ ಕ್ರಾಂತಿವೀರ ಬ್ರಿಗೇಡ್ ಆರಂಭಿಸಿದ್ದಾರೆ.
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಅನಿವಾರ್ಯವಾಗಿ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ ಈಶ್ವರಪ್ಪ, ಪುತ್ರ ಕೆ.ಇ.ಕಾಂತೇಶ್ ರಾಜಕೀಯವಾಗಿ ಬೆಳೆಯಲಿ ಎಂದು ಬಯಸಿದ್ದರು. ಬಹುತೇಕ ರಾಜಕಾರಣಿಗಳಂತೆ ಈಶ್ವರಪ್ಪ ಈ ಬಯಕೆ ಹೊಂದಿದ್ದು ತಪ್ಪೇನಲ್ಲ. ಆದರೆ ಲೋಕಸಭೆ ಚುನಾವಣೆಯಲ್ಲಿ ಹಾವೇರಿಯಲ್ಲಿ ಮಗನಿಗೆ ಟಿಕೆಟ್ ಸಿಗಲಿಲ್ಲ.
ಆಗ ರೋಷಾವೇಷದ ರಾಜಕೀಯಕ್ಕೆ ಮುಂದಾದ ಈಶ್ವರಪ್ಪ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದರು. ಆದರೆ ಅದರಿಂದ ಕಾರ್ಯಸಾಧನೆಯೇನೂ ಆಗಲಿಲ್ಲ. ಎದುರಾಗಿದ್ದು ಆಘಾತಕಾರಿ ಸೋಲು. ಪ್ರಚಾರದ ವೇಳೆ ಸಿಕ್ಕ ಬೆಂಬಲ ಮತಗಳಾಗಿ ಪರಿವರ್ತನೆಯಾಗಲಿಲ್ಲ.
ಇದೆಲ್ಲದರ ಹಿನ್ನೆಲೆಯಲ್ಲಿ ಶುರುವಾಗಿದ್ದೇ ಬ್ರಿಗೇಡ್ ಚಿಂತನೆ. ಕಳೆದೆರಡು ತಿಂಗಳಿನಿಂದ ಅನೇಕ ಬಾರಿ ಬ್ರಿಗೇಡ್ ಉದ್ಘಾಟನೆ ಬಗ್ಗೆ ಚರ್ಚೆಗಳು ನಡೆದವು. ಅಂತೂ ಇಂತೂ ಬಸವನಬಾಗೇವಾಡಿಯಲ್ಲಿ ಕ್ರಾಂತಿವೀರ ಹೆಸರಿನಲ್ಲಿ ಬ್ರಿಗೇಡ್ ಅಸ್ತಿತ್ವಕ್ಕೆ ಬಂದಿದೆ. ಈ ಬ್ರಿಗೇಡ್ ಬಿಜೆಪಿ ಶಕ್ತಿ ಕೇಂದ್ರ ಶಿವಮೊಗ್ಗದಲ್ಲಿ ಯಾವ ಮಟ್ಟದಲ್ಲಿ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಅಂದು ಜತೆಗಿದ್ದವರು ಈಗ ದೂರ: ರಾಯಣ್ಣ ಬ್ರಿಗೇಡ್ ಚಟುವಟಿಕೆಯಲ್ಲಿ ಈಶ್ವರಪ್ಪ ಜತೆಗಿದ್ದ ಕೆ.ಮುಕುಡಪ್ಪ ಈಗ ಕ್ರಾಂತಿವೀರ ಬ್ರಿಗೇಡ್‌ನಲ್ಲೂ ಸಾಥ್ ನೀಡಿದ್ದಾರೆ. ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಸಂಘಟನೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅದರೆ ತವರು ಜಿಲ್ಲೆ ಶಿವಮೊಗ್ಗದಲ್ಲಿ ಈಶ್ವರಪ್ಪ ಜತೆ ಎಂಟು ವರ್ಷಗಳ ಹಿಂದಿದ್ದ ಅನೇಕರು ಈಗಿಲ್ಲ. ರಾಯಣ್ಣ ಬ್ರಿಗೇಡ್ ಚಟುವಟಿಕೆಯಲ್ಲಿ ಅಂದು ತಾಪಂ ಸದಸ್ಯರಾಗಿದ್ದ ರೇಖಾ ಪ್ರವೀಣ್, ವನಜಾಕ್ಷಿ ಸುರೇಶ್, ಪಾಲಿಕೆ ಸದಸ್ಯರಾಗಿದ್ದ ಡಿ.ಮೋಹನ್ ರೆಡ್ಡಿ, ಸುರೇಖಾ ಮುರಳೀಧರ್, ವೆಂಕ್ಯಾನಾಯಕ್, ನಗರಸಭೆ ಸದಸ್ಯರಾಗಿದ್ದ ಸೋಮಸುಂದರಂ, ಸೂಡಾ ಮಾಜಿ ಅಧ್ಯಕ್ಷ ಎಸ್.ಜ್ಞಾನೇಶ್ವರ್ ಮುಂತಾದವರು ಭಾಗವಹಿಸಿದ್ದರು. ಈ ಪೈಕಿ ಅನೇಕರು ಕ್ರಾಂತಿವೀರ ಬ್ರಿಗೇಡ್‌ನಿಂದ ದೂರವುಳಿದಿದ್ದಾರೆ.
ಸ್ಥಳೀಯ ಸಂಸ್ಥೆಗಳೇ ಗುರಿ: ಹೊಸ ಬ್ರಿಗೇಡ್‌ನ ಗುರಿ ಹಿಂದುಳಿದವರ ಸಂಘಟನೆ ಎಂಬುದಾದರೂ ವಾಸ್ತವದಲ್ಲಿ ಅದು ಶಕ್ತಿ ಪ್ರದರ್ಶನದ ವೇದಿಕೆಯೂ ಆಗಲಿದೆ. ಲೋಕಸಭೆ ಚುನಾವಣೆಯಲ್ಲಿ ಕುಸಿದ ರಾಜಕೀಯದ ಗ್ರಾಫ್ ಏರಿಸಿಕೊಳ್ಳುವುದು ಈಗ ಈಶ್ವರಪ್ಪ ಅವರಿಗೆ ಅನಿವಾರ್ಯ. ಕಳೆದ 10 ತಿಂಗಳಲ್ಲಿ ಬಿಜೆಪಿಯಿಂದ ದೂರವಿರುವ ಅವರಿಗೆ ಹೇಗಾದರೂ ಮಾಡಿ ರಾಜಕೀಯ ಶಕ್ತಿ ಪ್ರದರ್ಶನ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಶಕ್ತಿ ಪ್ರದರ್ಶನಕ್ಕೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೇ ವೇದಿಕೆಯಾಗಲಿವೆ ಎಂಬುದು ನಿಶ್ಚಿತ. ಪಟ್ಟಣ ಹಾಗೂ ನಗರ ಸ್ಥಳೀಯ ಸಂಸ್ಥೆ, ಜಿಪಂ ಹಾಗೂ ತಾಪಂ ಚುನಾವಣೆಗಳಲ್ಲಿ ಬ್ರಿಗೇಡ್ ಬೆಂಬಲಿತರನ್ನು ಈಶ್ವರಪ್ಪ ಕಣಕ್ಕಿಳಿಸುವುದು ನಿಶ್ಚಿತ. ಹೀಗೆ ಅಖಾಡಕ್ಕಿಳಿದವರ ಪೈಕಿ ಎಷ್ಟು ಮಂದಿ ಗೆಲ್ಲುತ್ತಾರೆ ಎಂಬುದಕ್ಕಿಂತ ಬಿಜೆಪಿ ಅಭ್ಯರ್ಥಿಗಳಿಗೆ ಎಷ್ಟರ ಮಟ್ಟಿಗೆ ಪೈಪೋಟಿ ನೀಡುತ್ತಾರೆ ಎಂಬುದು ಪ್ರಶ್ನೆ. ಬಿಜೆಪಿ ಮತಗಳು ವಿಭಜನೆಯಾದರೆ ಅದರಿಂದ ಲಾಭವಾಗುವುದು ಕಾಂಗ್ರೆಸ್‌ಗೆ. ಈ ಬೆಳವಣಿಗೆಗಳು ಮತ್ತೆ ಈಶ್ವರಪ್ಪ ಅವರಿಗೆ ರಾಜಕೀಯವಾಗಿ ಶಕ್ತಿ ತುಂಬಬಲ್ಲವು. ಸದ್ಯಕ್ಕೆ ಅವರ ಗುರಿ ಸ್ಥಳೀಯ ಸಂಸ್ಥೆಗಳು.
ಮಾನಸಿಕವಾಗಿ ದೂರವಾಗಿಲ್ಲ:ಬಿಜೆಪಿಯಿಂದ ತಾಂತ್ರಿಕವಾಗಿ ಈಶ್ವರಪ್ಪ ದೂರವಾಗಿರಬಹುದು. ಆದರೆ ಮಾನಸಿಕವಾಗಿ ಅವರಿನ್ನೂ ಬಿಜೆಪಿಯಲ್ಲೇ ಇದ್ದಾರೆ. ನಾನು ಮತ್ತೆ ಯಾವುದಾದರೂ ಪಕ್ಷ ಸೇರುವುದಿದ್ದರೆ ಬಿಜೆಪಿಯೇ ನನ್ನ ಆಯ್ಕೆಯಾಗಲಿದೆ ಎಂದು ಈಗಾಗಲೇ ಅನೇಕ ಬಾರಿ ಹೇಳಿದ್ದಾರೆ. ಅದು ಸಹಜ ಕೂಡ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರೂ ಅದರ ಹಿಂದೆ ಇದ್ದದ್ದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ಮೇಲಿನ ಮುನಿಸು. ಕ್ರಾಂತಿವೀರ ಬ್ರಿಗೇಡ್ ಸದೃಢವಾದರೆ ಅದು ಈಶ್ವರಪ್ಪ ಅವರಿಗೆ ರಾಜಕೀಯ ಶಕ್ತಿ ತುಂಬುವುದು ನಿಶ್ಚಿತ. ಆಗ ಮಾತೃ ಪಕ್ಷದಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಲಿದೆ.
ಕರೆತರುವವರು ಯಾರು?:
ಯಡಿಯೂರಪ್ಪ 12 ವರ್ಷಗಳ ಹಿಂದೆ ಬಿಜೆಪಿ ತೊರೆದಿದ್ದಾಗ ಅವರು ಮರಳಿ ಬಿಜೆಪಿಗೆ ಬರಲು ಕಾರಣರಾದವರಲ್ಲಿ ಈಶ್ವರಪ್ಪ ಕೂಡಾ ಒಬ್ಬರು. ಆದರೆ ಈಗ ಈಶ್ವರಪ್ಪ ಅವರನ್ನು ಪಕ್ಷಕ್ಕೆ ತರಲು ಯಡಿಯೂರಪ್ಪ ಸಿದ್ಧರಿಲ್ಲ. ಇದಕ್ಕೆ ಕಾರಣ ಬಿಎಸ್‌ವೈ ಹಾಗೂ ಅವರ ಕುಟುಂಬದ ವಿರುದ್ಧ ಈಶ್ವರಪ್ಪ ಮಾಡಿರುವ ಗಂಭೀರ ಆರೋಪಗಳು. ಜಿಲ್ಲಾ ಬಿಜೆಪಿಯಲ್ಲಿ ಅನೇಕರಿಗೆ ಈಶ್ವರಪ್ಪ ಪರ ಒಲವು ಇದ್ದರೂ ಪ್ರಯೋಜನವಾಗುತ್ತಿಲ್ಲ. ಇನ್ನೊಂದೆಡೆ ರಾಜ್ಯ ಬಿಜೆಪಿಯ ಗೊಂದಲವನ್ನು ಪರಿಹರಿಸಲು ಹರಸಾಹಸ ಪಡುತ್ತಿರುವ ಕೇಂದ್ರ ನಾಯಕರು ಈಶ್ವರಪ್ಪ ಬಗ್ಗೆ ಅಷ್ಟೊಂದು ಗಮನ ನೀಡಿದಂತೆ ಕಾಣುತ್ತಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ ಆಗುವವರೆಗೂ ಈಶ್ವರಪ್ಪ ಬಿಜೆಪಿ ಮರು ಸೇರ್ಪಡೆ ಚರ್ಚೆ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ.