ಶಿವಮೊಗ್ಗ: ರಾಯಣ್ಣ ಬ್ರಿಗೇಡ್ ರಚನೆ ಕಾರ್ಯ ಭರದಿಂದ ಸಾಗಿದೆ. ಡಿ.2ರಂದು ಹುಬ್ಬಳ್ಳಿಯಲ್ಲಿ ಬ್ರಿಗೇಡ್‌ನ ಮಹತ್ವದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಗುವುದು. ಮುಂದಿನ ವರ್ಷ ಫೆ.4ರಂದು ಬಸವಣ್ಣನ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಬ್ರಿಗೇಡ್‌ಗೆ ಚಾಲನೆ ಸಿಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಫೆ.4ರಂದು ರಥಸಪ್ತಮಿಯಂದೇ ಬ್ರಿಗೇಡ್ ಉದ್ಘಾಟನೆಗೆ ನಿರ್ಧರಿಸಲಾಗಿದೆ. ಸಭೆಯಲ್ಲಿ ಒಂದು ಸಾವಿರಕ್ಕೂ ಅಧಿಕ ಸಾಧು ಸಂತರು ಪಾಲ್ಗೊಳ್ಳಲಿದ್ದು, ಅವರೆಲ್ಲರ ಪಾದಪೂಜೆ ನೆರವೇರಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಠ, ಮಂದಿರ, ಶಾಲಾ ಕಾಲೇಜುಗಳ, ರೈತರ ಜಮೀನುಗಳನ್ನು ವಕ್ಫ್ ಆಸ್ತಿಗೆ ಸೇರಿಸಿರುವುದು ಖಂಡನೀಯ. ಡಿ.2ರಂದು ಹುಬ್ಬಳ್ಳಿಯಲ್ಲಿ ನಡೆಯುವ ಬ್ರಿಗೇಡ್ ಸಮಿತಿ ಸಭೆಯಲ್ಲಿ ಅದನ್ನು ರದ್ದುಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಖರ್ಗೆ ವಿರುದ್ಧ ಈಶ್ವರಪ್ಪ ಕಿಡಿ: ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿಷಕಾರಿ ಹಾವು ಇದ್ದಂತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು ಅಕ್ಷಮ್ಯ. ಅವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.
ಆರ್‌ಎಸ್‌ಎಸ್ ವ್ಯಕ್ತಿತ್ವ ನಿರ್ಮಾಣದ ಸಂಘಟನೆ. ಹಿಂದುತ್ವ ಮತ್ತು ರಾಷ್ಟ್ರೀಯತೆ ಬಗ್ಗೆ ಅದು ಜಾಗೃತಿ ಮೂಡಿಸುತ್ತಿದೆ. ದೇಶದ ಜನರು ಸಂಘಟನೆಯನ್ನು ಒಪ್ಪಿದ್ದಾರೆ. ಖರ್ಗೆ ಅವರಂತಹ ಹಿರಿಯರು ಹೀಗೆ ಮಾತನಾಡಬಾರದಿತ್ತು. ಅವರು ದೇಶದ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ಅಧಿಕಾರ ದಾಹ ಮತ್ತು ಮುಸಲ್ಮಾನರನ್ನು ಸಂತೃಪ್ತಿಗೊಳಿಸುವ ದೃಷ್ಟಿಯಿಂದ ಖರ್ಗೆ ಈ ಹೇಳಿಕೆ ನೀಡಿದ್ದಾರೆ. ಇಂದಿರಾಗಾಂಧಿ ಮತ್ತು ನೆಹರೂ ಆರ್‌ಎಸ್‌ಎಸ್ ನಿಷೇಧಿಸಲು ಮುಂದಾಗಿದ್ದರು. ಅವರಿಂದ ಆಗಲಿಲ್ಲ. ಖರ್ಗೆ ಉದ್ದೇಶಪೂರ್ವಕವಾಗಿ ಮಾತನಾಡಿದ್ದಾರೆ. ಕಳೆದ ವಾರ ನನ್ನ ಮೇಲೆ ಕೇಸು ದಾಖಲಿಸಿದಂತೆ ಪೊಲೀಸರು ಖರ್ಗೆ ಮೇಲೂ ಕೇಸು ಹಾಕಲಿ ಎಂದು ಹೇಳಿದರು.
ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಎಂ.ಶಂಕರ್, ಮಹಾಲಿಂಗಯ್ಯ ಶಾಸ್ತ್ರಿ, ಇ.ವಿಶ್ವಾಸ್, ಬಾಲು, ಮೋಹನ್‌ಕುಮಾರ್ ಜಾಧವ್, ಶಿವಾಜಿ, ಶ್ರೀಕಾಂತ್ ಮುಂತಾದವರಿದ್ದರು.