ಉಡುಪಿ: ಕಳೆದ ಹಲವು ದಶಕಗಳ ಸ್ಥಳಿಯರ ಬೇಡಿಕೆಯಂತೆ ಕರ್ನಾಟಕ ನೀರಾವರಿ ನಿಗಮದ ಮೂಲಕ 2.50 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಿ, ಸಂಪರ್ಕ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿ ನಡೆಯಲಿದ್ದು, ಮಳೆಗಾಲದಲ್ಲಿ ನೀರು ಸರಾಗ ಹರಿದು ನೆರೆ ಸಮಸ್ಯೆ ಪರಿಹಾರವಾಗಲಿದೆ. ನೂತನ ರಸ್ತೆ ಕೊಡಂಕೂರಿನಿಂದ ಮೂಡಬೆಟ್ಟು ಭಾಗಕ್ಕೆ ನೇರ ಸಂಪರ್ಕ ಕಲ್ಪಿಸಲಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.
ಕೊಡಂಕೂರು ವಾರ್ಡಿನ ತಾರಕಟ್ಟ ಪ್ರದೇಶದಲ್ಲಿ ಸುಮಾರು 2.50 ಕೋಟಿ ವೆಚ್ಚದಲ್ಲಿ ಇಂದ್ರಾಣಿ ನದಿಗೆ ನೂತನ ಸೇತುವೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಿ, ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯೆ ರಜನಿ ಹೆಬ್ಬಾರ್, ನಗರಸಭಾ ಸದಸ್ಯರಾದ ಸಂಪಾವತಿ, ಹರೀಶ್ ಶೆಟ್ಟಿ, ಟಿ. ಜಿ. ಹೆಗ್ಡೆ, ಸವಿತಾ ಹರೀಶ್ ರಾಮ್, ಪಕ್ಷದ ಪ್ರಮುಖರಾದ ಹರೀಶ್ ರಾಮ್, ಸಂದೀಪ್ ಕೋಟ್ಯಾನ್, ರಾಜೇಶ್, ಜಯಕರ ಪಾಲನ್, ಪ್ರಶಾಂತ್ ಪೂಜಾರಿ, ಶಿವರಾಜ ಕರ್ಕೇರ ಉಪಸ್ಥಿತರಿದ್ದರು.