ಮಂಡ್ಯ: ತಾಲೂಕಿನ ಕಚ್ಚಿಗೆರೆ ಗ್ರಾಮದಲ್ಲಿ ಹಲವು ದಿನದ ಹಿಂದೆ ಕುಸಿದು ಹಾಳಾಗಿದ್ದ ಪ್ರಮುಖ ಸೇತುವೆಯನ್ನು ಸ್ವಂತ ಹಣದಲ್ಲಿ ದುರಸ್ತಿ ಮಾಡಿಸಿದ ಆರ್ಗ್ಯಾನಿಕ್ ಮಂಡ್ಯ ಸಂಸ್ಥಾಪಕರೂ ಆದ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್‌ಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಕಚ್ಚಿಗೆರೆ ಗ್ರಾಮದ ತಿಟ್ಟಿನ ರಸ್ತೆಯಲ್ಲಿರುವ ಸೇತುವೆ ಮುರಿದು ಬಿದ್ದಿತ್ತು. ಇದರಿಂದಾಗಿ ಸುಮಾರು 500 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಬ್ಬಿನ ಬೆಳೆಯನ್ನು ಸಾಗಾಟ ಮಾಡಲು ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸೇತುವೆ ದುರಸ್ತಿಪಡಿಸಿಕೊಡುವಂತೆ ಹಲವು ಬಾರಿ ಅಧಿಕಾರಿಗಳು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ದರು. ಆದರೂ ಯಾವುದೇ ಕ್ರಮ ವಹಿಸಿರಲಿಲ್ಲ. ಇದರಿಂದ ಗ್ರಾಮಸ್ಥರು ಅಸಮಾಧಾನಗೊಂಡಿದ್ದರು.
ಇತ್ತ ಕಬ್ಬನ್ನು ಸಾಗಾಟ ಮಾಡಲು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎಸ್.ಸಿ.ಮಧುಚಂದನ್ ಅವರನ್ನು ಸಂಪರ್ಕಿಸಿ ಸೇತುವೆ ಹಾಗೂ ರಸ್ತೆ ದುರಸ್ತಿಪಡಿಸಿಕೊಡುವಂತೆ ಮನವಿ ಮಾಡಿದ್ದರು. ಕೂಡಲೇ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅವರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸ್ವಂತ ಹಣದಲ್ಲಿ ಸೇತುವೆ ದುರಸ್ತಿ ಮಾಡಿಸಿಕೊಟ್ಟರು. ಜೆಸಿಬಿ ಯಂತ್ರವನ್ನು ಬಳಸಿಕೊಂಡು ಕುಸಿದಿದ್ದ ಜಾಗಕ್ಕೆ ಕಲ್ಲುಗಳನ್ನು ಭರ್ತಿ ಮಾಡಿಸಿ ಸೇತುವೆ ಕುಸಿಯದಂತೆ ಎರಡು ಕಡೆ ಬಿಗಿಗೊಳಿಸಲಾಗಿದೆ. ಮನವಿಗೆ ತ್ವರಿತವಾಗಿ ಸ್ಪಂದಿಸಿ ಸಮಸ್ಯೆ ಬಗೆಹರಿಸಿಕೊಟ್ಟ ಎಸ್.ಸಿ.ಮಧುಚಂದನ್ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.