ಕುಮಟಾ: ತಾಲೂಕಿನ ಸಂತೆಗುಳಿ ಪಂಚಾಯಿತಿ ವ್ಯಾಪ್ತಿಯ ದೀವಳ್ಳಿ ಬಳಿ ರಾಜ್ಯ ಹೆದ್ದಾರಿ 48ರಲ್ಲಿ ಕಳೆದ ಮಳೆಗಾಲದಲ್ಲಿ ಪ್ರವಾಹದಿಂದ ಹಾನಿಗೀಡಾಗಿದ್ದ ಸೇತುವೆಯ ಮರು ನಿರ್ಮಾಣಕ್ಕೆ ಶಾಸಕ ದಿನಕರ ಶೆಟ್ಟಿ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಸ್ಥಳೀಯ ಪಂಚಾಯಿತಿ ಆಡಳಿತ ಮತ್ತು ಈ ಭಾಗದ ಬಿಜೆಪಿ ಪ್ರಮುಖರ ಮನವಿ ಮೇರೆಗೆ ಕುಮಟಾ- ಕೊಡಮಡಗು ರಸ್ತೆ ನಡುವಿನ ಕಿರು ಸೇತುವೆ ಮರು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಳೆದ ಬಾರಿ 19 ಕೋಟಿ ರೂ. ವೆಚ್ಚದಲ್ಲಿ ಚಂದಾವರದಿಂದ ಬಡಾಳದ ಮಧ್ಯದಲ್ಲಿ ಅತ್ಯುತ್ತಮ ರಸ್ತೆ ನಿರ್ಮಿಸಲಾಗಿದೆ. ಇನ್ನೂ 10 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಆರಂಭವಾಗಲಿದೆ ಎಂದರು.
ಅಂದಾಜು 1.10 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಯನ್ನು 85.12 ಲಕ್ಷ ರೂ.ಗಳಿಗೆ ಗುತ್ತಿಗೆದಾರ ಗಜಾನನ ಎಸ್. ಗುನಗಾ ಪಡೆದಿದ್ದು, ಮುಂಬರುವ ಮಳೆಗಾಲದೊಳಗೆ ಪೂರ್ಣಗೊಳಿಸಬೇಕಿದೆ. ಸಂತೆಗುಳಿ ಪಂಚಾಯಿತಿ ಮಾಜಿ ಅಧ್ಯಕ್ಷ ವಿನಾಯಕ್ ಭಟ್, ಸದಸ್ಯರಾದ ಬುಡನ್ ಸಾಬ್, ಗಜಾನನ ನಾಯ್ಕ , ಶೈಲಾ ನಾಯ್ಕ, ಗುತ್ತಿಗೆದಾರ ಗಜಾನನ ಎಸ್. ಗುನಗ, ಪಿಡಬ್ಲ್ಯುಡಿ ಇಂಜಿನಿಯರ್ ಎಂ. ಪಿ. ನಾಯ್ಕ, ಎಇಇ ಸೋಮನಾಥ ಭಂಡಾರಿ ಇತರರು ಇದ್ದರು.