ಅನ್ಸಾರ್ ಇನೊಳಿ, ಉಳ್ಳಾಲ
ಉಳ್ಳಾಲ ದರ್ಗಾ ಉರುಸ್ ಆರಂಭಕ್ಕೆ ಇನ್ನು ವಾರ ಮಾತ್ರ ಬಾಕಿಯಿದೆ. ಈ ನಡುವೆ ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ನೇತ್ರಾವತಿ ಸೇತುವೆ ದುರಸ್ತಿ ಕಾಮಗಾರಿ ಆಮೆ ನಡಿಗೆಯಲ್ಲಿದ್ದು ಉರುಸ್ ಸಂದರ್ಭದಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ. ಆದರೆ ಉರುಸ್ ಮೊದಲೇ ಕಾಮಗಾರಿ ಮುಗಿಸುವ ಭರವಸೆ ಇಲಾಖೆ ನೀಡಿದೆ. ಉಳ್ಳಾಲ ಸಯ್ಯದ್ ಮದನಿ ದರ್ಗಾ ಉರುಸ್ ಮುಂದಿನ ವಾರ ಅಂದರೆ ಏ.24ರಿಂದ ಆರಂಭಗೊಳ್ಳಲಿದೆ.
ವಿವಿಧ ಭಾಗಗಳಿಂದ ಆಗಮನ: ಶಾಲೆಗಳಿಗೆ ಬೇಸಿಗೆ ರಜೆಯಿರುವುದರಿಂದ ಈಗಾಗಲೇ ದರ್ಗಾದತ್ತ ಜನ ಸಮೂಹ ಹರಿದು ಬರುತ್ತಿದ್ದು ಉರುಸ್ ಆರಂಭಗೊಡ ಬಳಿಕ ಈ ಸಂಖ್ಯೆ ಹತ್ತು ಪಟ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಪ್ರಸ್ತುತ ವಿವಿಧ ಭಾಗಗಳಿಂದ ಜನರು ಉಳ್ಳಾಲಕ್ಕೆ ಬರುತ್ತಿದ್ದು, ಉರುಸ್ ಸಂದರ್ಭ ದಕ್ಷಿಣ ಕನ್ನಡ, ಉಡುಪಿ ಸಹಿತ ವಿವಿಧ ಜಿಲ್ಲೆಗಳಿಂದ ಜನ ಆಗಮಿಸಲಿದ್ದಾರೆ.
ಟ್ರಾಫಿಕ್ ಸಮಸ್ಯೆ: ಸುಳ್ಯ, ಬಂಟ್ವಾಳ, ಪುತ್ತೂರು ಭಾಗದವರು ಮೆಲ್ಕಾರ್ ಅಥವಾ ಹರೇಕಳ ಮೂಲಕ ಕೊಣಾಜೆಯಾಗಿ ಬರುವುದರಿಂದ ನೇತ್ರಾವತಿ ಸೇತುವೆ ಸಮಸ್ಯೆ ಇಲ್ಲ. ಅದರೆ ಉಡುಪಿ ಸಹಿತ ಇತರ ಭಾಗಗಳಿಂದ ನೇತ್ರಾವತಿ ಸೇತುವೆ ಮೂಲಕವೇ ಉಳ್ಳಾಲಕ್ಕೆ ಬರಬೇಕಾಗುತ್ತದೆ. ಧಾರ್ಮಿಕ ಪ್ರವಚನ ರಾತ್ರಿ ವೇಳೆಯೇ ಇರುವುದಲ್ಲದೆ ಲೈಟಿಂಗ್ ಸೌಂದರ್ಯ ನೋಡಲು ರಾತ್ರಿ ವೇಳೆಯೇ ಬರುತ್ತಾರೆ. ಈಗಾಗಲೇ ನೇತ್ರಾವತಿ ಸೇತುವೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಬಳಿಕ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಉರುಸ್ ಸಂದರ್ಭ ಟ್ರಾಫಿಕ್ ಸಮಸ್ಯೆ ನಾಲ್ಕು ಪಟ್ಟು ಹೆಚ್ಚಾಗುವ ಸಾಧ್ತೆಯಿದೆ. ಉರುಸ್ ಸಂದರ್ಭ ಸಂಚಾರಕ್ಕೆ ಮುಕ್ತವಾಗುವುದು ಅನಿವಾರ್ಯ.
ವಾಹನ ಸಂಚಾರ ಹೆಚ್ಚು: 77 ವರ್ಷಗಳ ಹಿಂದೆ ಈ ಸೇತುವೆ ನಿರ್ಮಾಣಗೊಂಡಿದ್ದು ನವೀಕರಣ ಕಾಮಗಾರಿ ಏ.2ರಿಂದ ಅರಂಭಗೊಂಡಿದೆ. ತಿಂಗಳಲ್ಲಿ ಮುಗಿಸುವ ಭರವಸೆ ನೀಡಲಾಗಿದ್ದು ಉರುಸ್ ಸಂದರ್ಭ ಸಂಚಾರಕ್ಕೆ ಮುಕ್ತಗೊಳಿಸುವ ಅನಿವಾರ್ಯತೆ ಇದೆ. ಈ ರಸ್ತೆಯ ಮೂಲಕ ಕೊಣಾಜೆ, ಬಿ.ಸಿ.ರೋಡು, ಕೇರಳ, ತಮಿಳ್ನಾಡು ಭಾಗದ ವಾಹನಗಳು ಸಂಚರಿಸುತ್ತಿದ್ದು ದಿನವಿಡೀ ವಾಹನ ದಟ್ಟಣೆ ಇರುತ್ತದೆ. ಅಲ್ಲದೆ ಕಲ್ಲಾಪು ಸಮೀಪ ರಾ.ಹೆ.ಗೆ ತಾಗಿಕೊಂಡೇ ಖಾಸಗಿ ಮಾರುಕಟ್ಟೆಯೂ ಇದೆ. ಇಲ್ಲಿಗೆ ತಡರಾತ್ರಿ ಬಳಿಕ ವಿವಿಧ ಜಿಲ್ಲೆಗಳಿಂದ ತರಕಾರಿ, ಹಣ್ಣು ಹಾಗೂ ಇತರ ಸರಕುಗಳ ವಾಹನ, ಇಲ್ಲಿಂದ ಬೇರೆಡೆ ಸಾಗಿಸುವ ವಾಹನಗಳೂ ಬರುತ್ತವೆ. ಬೆಳಗ್ಗೆ ಮತ್ತು ಮಧ್ಯಾಹ್ನದ ಬಳಿಕ ವಾಹನ ಸಂಚಾರ ಹೆಚ್ಚಾಗುತ್ತದೆ.
ಶೀಘ್ರ ದುರಸ್ತಿ ಅನುಮಾನ: ಏ.2ರಿಂದ ಹಳೇ ಸೇತುವೆ ಕೆಳಭಾಗದಲ್ಲಿರುವ ಪಿಲ್ಲರ್‌ಗಳಿಗೆ ಬೇರಿಂಗ್ ಅಳವಡಿಸುವ ಹಾಗೂ ಮೇಲ್ಭಾಗದಲ್ಲೂ ದುರಸ್ತಿ ಕಾಮಗಾರಿ ನಡೆಸಲಾಗುತ್ತಿದೆ. ಅಡಿಭಾಗದಲ್ಲಿ 12 ಬೇರಿಂಗ್ ಅಳವಡಿಕೆಗೆ ಎಂಟು ಕಾರ್ಮಿಕರು ಹಾಗೂ ಓರ್ವ ಸೂಪರ್‌ವೈಸರ್ ಕೆಲಸದಲ್ಲಿ ನಿರತರಾಗಿದ್ದಾರೆ. ಇದನ್ನು ಗಮನಿಸಿದಾಗ ಇನ್ನುಳಿದ ಎರಡು ವಾರಗಳಲ್ಲಿ ಕಾಮಗಾರಿ ಮುಗಿಯುವುದು ಅನುಮಾನ ಇದೆ.
ಸಂಚಾರ ದುಸ್ತರ: ಕಾಮಗಾರಿ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ಬರುವ ವಾಹನಗಳು ಆಡಂಕುದ್ರುವಿನಿಂದ ವಿರುದ್ಧ ದಿಕ್ಕಿನ ರಸ್ತೆ ಪ್ರವೇಶಿಸಿ ಹೊಸ ಸೇತುವೆಯಲ್ಲಿ ಸಾಗಿ ಜಪ್ಪಿನಮೊಗರುವಿನಲ್ಲಿ ಇನ್ನೊಂದು ಬದಿಯ ರಸ್ತೆ ಪ್ರವೇಶಿಸುವ ವ್ಯವಸ್ಥೆ ಮಾಡಲಾಗಿದೆ. ಸೇತುವೆಯುದ್ದಕ್ಕೂ ವಾಹನಗಳ ಸರತಿ ಸಾಲು ಕಂಡು ಬರುತ್ತಿದ್ದು ಬೆಳಗ್ಗೆ ಮತ್ತು ಮಧ್ಯಾಹ್ನ ಬಳಿಕ ಸಂಚಾರ ದುಸ್ತರ ಎನಿಸಿದೆ. ಉರುಸ್ ಸಂದರ್ಭ ಸಂಕಷ್ಟ ಇನ್ನಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.
ಸಹನೆ, ಸಹಕಾರ ಅಗತ್ಯ
ಸೇತುವೆ ದುರಸ್ತಿ ಕಾರ್ಯ ಜನರಿಗಾಗಿಯೇ ನಡೆಸಲಾಗುತ್ತಿದೆ, ಉರುಸ್ ಬಳಿಕ ಮಳೆಗಾಲ ಬರುವುದರಿಂದ ಕಾಮಗಾರಿ ನಡೆಸಲಾಗದು. ಅಲ್ಲದೆ ಸೇತುವೆ ಅಡಿಭಾಗದಲ್ಲಿ ಹೆಚ್ಚು ಕಾರ್ಮಿಕರನ್ನು ಹಾಕಿ ಕೆಲಸ ಮಾಡಲು ಅಸಾಧ್ಯ, ಅದು ಕಾಂಕ್ರೀಟ್ ಕಾಮಗಾರಿಯಲ್ಲ. ಕೊಣಾಜೆ, ದೇರಳಕಟ್ಟೆ, ನರಿಂಗಾನ, ಮುಡಿಪು ಭಾಗದವರು ಹರೇಕಳ ಮಾರ್ಗವಾಗಿ ಮಂಗಳೂರಿಗೆ ಹೋಗುವ ಅವಕಾಶ ಇದೆ. ಸೇತುವೆ ಗಟ್ಟಿಯಿದ್ದರೆ ಸಂಚಾರ ಸಾಧ್ಯ. ಸಾರ್ವಜನಿಕರು ಓವರ್ ಟೇಕ್ ಮಾಡದೆ ನಿಧಾನವಾಗಿ ಚಲಿಸಿದರೆ ಬ್ಲಾಕ್ ಆಗದು. ಕಾಮಗಾರಿ ಸಂದರ್ಭ ಸಹನೆ ವಹಿಸಿ ಸಹಕರಿಸಬೇಕು. ಈ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದು ಏ.24 ಕ್ಕೆ ಮೊದಲು ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಕೇರಳ, ತಮಿಳ್ನಾಡು ಮಾತ್ರವಲ್ಲದೆ ಕೊಣಾಜೆ, ಮುಡಿಪು ಭಾಗದಿಂದ ಮಂಗಳೂರಿಗೆ ಹೋಗಲು ನೇತ್ರಾವತಿ ಸೇತುವೆ ಸಂಪರ್ಕ ಕೊಂಡಿಯಾಗಿದ್ದು ಆಯಾ ಕಾಲಕ್ಕೆ ದುರಸ್ತಿ ಅನಿವಾರ್ಯ. ಉಳ್ಳಾಲ ಉರುಸ್ ಸಂದರ್ಭದಲ್ಲೇ ಕಾಮಗಾರಿ ನಡೆಸುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಶೀಘ್ರ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು. ಇಬ್ರಾಹಿಂ ಕಲ್ಲೂರು, ಸಮಾಜ ಸೇವಕ https://www.vijayavani.net/middle-class-family-movie-screening https://www.vijayavani.net/cleanliness-campaign-at-tourist-spots