ಎನ್.ಮುನಿವೆಂಕಟೇಗೌಡ ಕೋಲಾರ
ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ದುಡ್ಡೇ ದೊಡ್ಡಪ್ಪ ಎನ್ನುವಂತಾಗಿದ್ದು, ಹಣವಿಲ್ಲದೆ ಕೆಲಸ ನಡೆಯುವುದೇ ಇಲ್ಲ ಎಂಬ ಪರಿಸ್ಥಿತಿ ನಿಮಾರ್ಣವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಸಣ್ಣ&ಪುಟ್ಟ ಕೆಲಸಗಳಿಗೂ ಲಂಚ ನೀಡಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜೂ.10ರಂದು ಸಂಜೆ ಜಿಲ್ಲಾಡಳಿತ ಕೇಂದ್ರದಲ್ಲಿ ಲೋಕಾಯುಕ್ತ ಬಲೆಗೆ ಒಂದೇ ದಿನ ಮೂವರು ಸರ್ಕಾರಿ ನೌಕರರು ಸಿಕ್ಕಿಬಿದ್ದಿದ್ದಾರೆ.
ಈ ಅವ್ಯವಸ್ಥೆಗೆ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳಿಂದ ತಿಂಗಳ ಮಾಮೂಲಿ ಪಡೆಯುವುದು ಒಂದು ಕಾರಣ ಎನ್ನಲಾಗಿದ್ದು, ಜಿಲ್ಲೆಯ ಒಂದಿಬ್ಬರು ಶಾಸಕರನ್ನು ಹೊರತುಪಡಿಸಿದರೆ ಶಾಸಕರ ಹೆಸರಿನಲ್ಲಿ ಅವರ ಹಿಂಬಾಲಕರು ಮಾಮೂಲಿ ವಸೂಲಿ ಮಾಡುವುದು ಗುಟ್ಟಾಗೇನೂ ಉಳಿದಿಲ್ಲ. ಆದ್ದರಿಂದಲೇ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರಿಂದ ಹಣ ಪಡೆಯುವುದನ್ನು ಹಕ್ಕೆಂಬಂತೆ ರೂಢಿ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಲಂಚಾವತಾರ ಬಯಲು: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿರಸ್ತೇದಾರರಾಗಿದ್ದ ಚಂದ್ರಪ್ಪ ಹಾಗೂ ಪ್ರಥಮ ದರ್ಜೆ ಗುಮಾಸ್ತ ಅಜಯ್ಕುಮಾರ್ ಮತ್ತು ಗ್ರಾಮ ಸಹಾಯಕ ಮುನಿರಾಜು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಎ1 ಆರೋಪಿಯಾಗಿರುವ ಅಜಯ್ಕುಮಾರ್ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಕಾರಣ ಬಂಧನದಿಂದ ತಪ್ಪಿಸಿಕೊಂಡಿದ್ದು, ಪೊಲೀಸರು ಹುಡುಕಾಟದಲ್ಲಿದ್ದಾರೆ. ಮತ್ತೊಬ್ಬರ ಮನೆ ಮೇಲೆ ಲೋಕಾಯುಕ್ತ ದಾಳಿ ಜಿಲ್ಲಾಧಿಕಾರಿಗಳ ಕಚೇರಿಯ ಲಂಚಾವತಾರಕ್ಕೆ ಸಾಕ್ಷಿಯಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 1 ವರ್ಷದಿಂದ ಶಿರಸ್ತೇದಾರ ಗೋಪಾಲಕೃಷ್ಣ, ಎಸಿ ಕಚೇರಿಯಲ್ಲಿ ಗುಮಾಸ್ತರಾಗಿದ್ದ ಕೋಮಲಾ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದು, ಈಗಾಗಲೇ ಜೈಲು ಸೇರಿದ್ದಾರೆ.
14 ದಿನ ನ್ಯಾಯಾಂಗ ಬಂಧನ : ಮಂಗಳವಾರ ಸಂಜೆ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿರುವ ಶಿರಸ್ತೇದಾರ ಚಂದ್ರಪ್ಪ ಮತ್ತು ಗ್ರಾಮ ಸಹಾಯಕ ಮುನಿರಾಜು ಮತ್ತು ಮುಳಬಾಗಿಲು ತಾಲೂಕು ನಂಗಲಿ ಬಳಿಯ ಬಾರ್ವೊಂದರಲ್ಲಿ ತಿಂಗಳ ಮಾಮೂಲಿ ಪಡೆಯುತ್ತಿದ್ದ ನಂಗಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಅರ್ಜುನ್ಗೌಡ ಮತ್ತು ಗುಪ್ತದಳದ ಪೇದೆ ಸುರೇಶ್ ಅವರನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನಾಲ್ವರಿಗೂ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಿತ ಕಾಯುವವರೇ ಲಂಚಬಾಕರಾದರೆ ಹೇಗೆ? : ಸರ್ಕಾರಿ ನೌಕರರ ಹಿತ ಕಾಪಾಡಬೇಕಿರುವ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರೇ ಲಂಚ ಪಡೆಯುವ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದಾರೆ ಎಂದರೆ ಇನ್ನು ನೌಕರರ ಹಿತ ಕಾಪಾಡುವುದು ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇದೇ ರೀತಿ ಮಾಜಿ ಅಧ್ಯಕ್ಷ ಸುರೇಶ್ಬಾಬು ಮನೆ ಮೇಲೂ ಲೋಕಾಯುಕ್ತ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದೇ ವರ್ಷದಲ್ಲಿ 3 ಬಾರಿ ದಾಳಿ ನಡೆಸಿರುವುದು ಗಮನಾರ್ಹ.