ದೊಡ್ಡಬಳ್ಳಾಪುರ : ನಗರಸಭೆಯಲ್ಲಿ ಇ&ಖಾತೆ ಮಾಡಿಕೊಡಲು ಜನಸಾಮಾನ್ಯರ ಬಳಿ ಲಂಚ ಪಡೆಯುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕನ್ನಡ ಪಕ್ಷದ ಕಾರ್ಯಕರ್ತರು ಸೋಮವಾರ ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಕನ್ನಡ ಪಕ್ಷದ ಹಿರಿಯ ಮುಖಂಡ ಡಿ.ಪಿ.ಆಂಜನೇಯ ಮಾತನಾಡಿ, ನಗರಸಭೆಯ ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ಭ್ರಷ್ಟ ಅಧಿಕಾರಿಗಳು ಇ&ಖಾತೆಗೆ ಅರ್ಜಿ ಸಲ್ಲಿಸಿದ ಅರ್ಜಿದಾರರನ್ನು ಅಲೆದಾಡಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ. ಮಧ್ಯವರ್ತಿಗಳ ಮೂಲಕ ಹೋದಂತಹ ಅರ್ಜಿಗಳನ್ನು ಬಹಳ ಮುತುವರ್ಜಿ ವಹಿಸಿ ವಾರದೊಳಗೆ ಇ&ಖಾತೆ ಮಾಡಿಕೊಡುವ ಅಧಿಕಾರಿಗಳು, ಸಾಮಾನ್ಯ ಜನರಿಂದ ಹೋದ ಅರ್ಜಿಗಳನ್ನು ಮೂಟೆ ಕಟ್ಟಿ ಮೂಲೆಗೆ ಎಸೆದು ಇಲ್ಲ ಸಲ್ಲದ ನೆಪ ಹೇಳಿ ತಿಂಗಳಾನುಗಟ್ಟಲೆ ಅಲೆಸುತ್ತಿದ್ದಾರೆ. ಆರೋಗ್ಯ ಇಲಾಖೆಯಲ್ಲೂ ಜನನ, ಮರಣ ಪ್ರಮಾಣ ಪತ್ರ ಪಡೆಯಲು ಇಂತಿಷ್ಟು ನಿಗದಿತ ಮೊತ್ತ ವಸೂಲಿ ಆಗುತ್ತಿದೆ. ಈ ಹಿಂದೆ 2009ರಲ್ಲಿ ಒಳಚರಂಡಿ ಕಾಮಗಾರಿ ಪ್ರಾರಂಭವಾದಾಗ ನಮ್ಮ ಕನ್ನಡ ಪಕ್ಷ ಇದು ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಾಗುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ದಾಖಲೆ ಸಮೇತ ದೂರು ನೀಡಿ ಪ್ರತಿಭಟಿಸಲಾಗಿತ್ತು. ಆದರೂ ಅಧಿಕಾರಿಗಳ ರ್ನಿಲಕ್ಷ$್ಯದಿಂದಾಗಿ ನಾಗರಿಕರ ಹಿಡಿ ಶಾಪ ಹಾಕುವಂತಾಗಿದೆ ಆಕ್ರೋಶ ವ್ಯಕ್ತಪಡಿಸಿದರು.
ಡಾ.ಶಿವರಾಜ್ಕುಮಾರ್ ಸೇನಾ ಸಮಿತಿ ಅಧ್ಯಕ್ಷ ರಮೇಶ್ ಮಾತನಾಡಿ, ಶಾಸಕರು ಆರಂಭದಲ್ಲಿ ಒಂದು ರೂ. ಲಂಚ ಕೊಡದೆ ಖಾತೆ ಮಾಡಿಸಿಕೊಳ್ಳಿ ಎಂದು ವಿಡಿಯೋ ಮಾಡಿ ಹೇಳಿದ್ದರು. ಲಂಚ ಕೇಳಿದರೆ ನನಗೆ ಹೇಳಿ ಎಂದು ಹೇಳಿದ್ದರು. ಆದರೆ, ಇಲ್ಲಿ ಒಂದು ಖಾತೆಗೆ 20 ರಿಂದ 40 ಸಾವಿರ ರೂ. ಲಂಚ ತೆಗೆದುಕೊಳ್ಳುತ್ತಿದ್ದಾರೆ. ಶಾಸಕ ಧೀರಜ್ ಮುನಿರಾಜು ಈ ಭ್ರಷ್ಟ ವ್ಯವಸ್ಥೆಯನ್ನು ತಡೆಯಬೇಕು. ಇಂತಹ ಭ್ರಷ್ಟ ಅಧಿಕಾರಿಗಳನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಹೆಚ್ಚಿದೆ ಕೆಲಸದ ಒತ್ತಡ : ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಕಾರ್ತಿಕ್ ಈಶ್ವರ್ ಮನವಿ ಸ್ವೀಕರಿಸಿ ಮಾತನಾಡಿದರು. ನಗರಸಭೆಯಲ್ಲಿ 3,700 ಅರ್ಜಿಗಳು ಬಂದಿವೆ. ಇದರಲ್ಲಿ 2700 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಕೆಲಸದ ಒತ್ತಡ ಹೆಚ್ಚಿದೆ. ತಪ್ಪು ಎಸಗಿದ ಅಧಿಕಾರಿಗಳ ವಿರುದ್ಧ ದೂರು ನೀಡಿ. ಮೇಲಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ರವಾನಿಸಲಾಗುವುದು ಎಂದರು.