ಜಿಲ್ಲೆ

ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಇಬ್ಬರಿಗೆ ಜೈಲು ಶಿಕ್ಷೆ

Uttara Kannada - Subash Hegde

ಕಾರವಾರ: ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಇಬ್ಬರು ಅಧಿಕಾರಿಗಳಿಗೆ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆದೆ.  ಮನೆ ನಂಬರ್ ನೀಡಲು ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದ ಗ್ರಾಪಂ ಪಿಡಿಒಗೆ 4 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಮುಂಡಗೋಡ ಅಗಡಿ ಗ್ರಾಮ ಮೂಲದ ಶಿರಸಿ ಜಾನ್ಮನೆ ಪಿಡಿಒ ಆಗಿದ್ದ ಕೃಷ್ಣಪ್ಪ ಶಿವಪ್ಪ ಯಲವಗಿ ಶಿಕ್ಷೆಗೊಳಗಾದ ಅಪರಾಽ. ಸುಧೀಂದ್ರ ಮಂಜುನಾಥ ಹೆಗಡೆ ಅವರು ಸುಕ್ರಿಮನೆ ಗ್ರಾಮದಲ್ಲಿ ಮನೆ ಕಟ್ಟಿಸಿದ್ದು ಅದಕ್ಕೆ ನಂಬರ್ ನೀಡುವಂತೆ 2015 ರಲ್ಲಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅದನ್ನು ಗ್ರಾಪಂ ತಿರಸ್ಕರಿಸಿತ್ತು. 2020 ರಲ್ಲಿ ಮತ್ತೆ ಅರ್ಜಿ ಸಲ್ಲಿಸಿದ ಸುಧೀಂದ್ರ  ಹೆಗಡೆ ಗ್ರಾಪಂಗೆ ಭೇಟಿಯಾದಾಗ ಮನೆ ಸಂಖ್ಯೆ ನೀಡಲು ಹಲವು ಸಮಸ್ಯೆಗಳಿವೆ. ಅದಕ್ಕೆ ಖರ್ಚಾಗುತ್ತದೆ ಎಂದು ಪಿಡಿಒ ಸಬೂಬು ಹೇಳಿದ್ದರು. 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ಸುಧೀಂದ್ರ ಹೆಗಡೆ ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದರು. ಪಿಡಿಒ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಕೃಷ್ಣಪ್ಪ ಅವರನ್ನು ಬಂಧಿಸಿದ್ದರು. ತನಿಖೆ ನಡೆಸಿದ ಲೋಕಾಯುಕ್ತ ಇನ್ಸ್ಪೆಕ್ಟರ್ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ತೀರ್ಪು ಪ್ರಕಟಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕರಾಗಿ ಎಲ್.ಎಂ.ಪ್ರಭು ವಾದ ಮಂಡಿಸಿದ್ದರು.

ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿರಸಿ ಭೂ ದಾಖಲೆಗಳ ಇಲಾಖೆಯ ಸರ್ವೇಯರ್‌ಗೆ 2 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ವಿಶೇಷ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಸರ್ವೇಯರ್ ಮಲ್ಲೇಶ ಜೆ. ಶಿಕ್ಷೆಗೊಳಗಾದ ಅಪರಾಧಿ. ಆತನಿಗೆ ಶಿಕ್ಷೆಯ ಜತೆ 10 ಸಾವಿರ ರೂ. ದಂಡ ವಿಧಿಸಲಾಗಿದೆ. ಜಿಲ್ಲಾ ನ್ಯಾಯಾಧೀಶ ವಿಜಯಕುಮಾರ್ ಅವರು ತೀರ್ಪು ನೀಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಎಲ್.ಎಂ.ಪ್ರಭು ವಾದ ಮಂಡಿಸಿದ್ದರು ಎಂದು ಲೋಕಾಯುಕ್ತ ಎಸ್‌ಪಿ ಕುಮಾರ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.