ಎನ್.ಆರ್.ಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಡಾ. ವಿಜಯಕುಮಾರ್ ಉದ್ಘಾಟಿಸಿದರು. ಡಾ. ಚಂದ್ರಪ್ರಭಾ, ಡಾ. ಪ್ರಭು, ಡಾ. ಶ್ರೀರಂಜಿನಿ, ಡಿ.ಸಿ.ದಿವಾಕರ್, ಬಿಂದು, ಮಧು, ರಾಧಿಕಾ, ಡೈಸಿ ಇದ್ದರು. 
ಜಿಲ್ಲೆ

ಸ್ತನ್ಯಪಾನ ಪ್ರತಿ ಮಗುವಿನ ಹಕ್ಕು

ಎನ್.ಆರ್.ಪುರ: ಸ್ತನ್ಯಪಾನದಿಂದ ಮಗು ಆರೋಗ್ಯಯುತವಾಗಿ ಬೆಳವಣಿಗೆ ಹೊಂದುತ್ತದೆ ಎಂದು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ವಿಜಯಕುಮಾರ್ ತಿಳಿಸಿದರು.

ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ಮಾತನಾಡಿ, ಪ್ರತಿ ವರ್ಷ ಆ.1ರಿಂದ 7ರವರೆಗೆ ಸ್ತನ್ಯಪಾನ ಸಪ್ತಾಹವನ್ನು ವಿಶ್ವದಾದ್ಯಂತ ನಡೆಸಲಾಗುತ್ತಿದೆ. ಸ್ತನ್ಯಪಾನದ ಮಹತ್ವ ತಿಳಿಸುವ, ಶಿಶುಮರಣ ಮತ್ತು ತಾಯಿ ಮರಣ ಕಡಿಮೆಗೊಳಿಸುವ ಸ್ತನ್ಯಪಾನದಲ್ಲಿ ಪುರುಷರ ಸಹಭಾಗಿತ್ವ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗರ್ಭಿಣಿಯರು, ಬಾಣಂತಿಯರು ತಾಯಿಹಾಲಿನ ಮಹತ್ವ ತಿಳಿದು ಮಗುವಿಗೆ ಹಾಲುಣಿಸಬೇಕು ಎಂದು ಹೇಳಿದರು.
ಮಕ್ಕಳ ತಜ್ಞ ಡಾ. ಪ್ರಭು ಮಾತನಾಡಿ, ಸ್ತನ್ಯಪಾನ ಪ್ರತಿ ಮಗುವಿನ ಹಕ್ಕು. ಮಗು ಜನಿಸಿ ಒಂದು ಗಂಟೆಯ ಒಳಗಾಗಿ ಸ್ತನ್ಯಪಾನ ಮಾಡಿಸಬೇಕು. ಆರು ತಿಂಗಳವರೆಗೆ ಬೇರೆ ಯಾವುದೇ ಆಹಾರ ಪದಾರ್ಥ ನೀಡದೆ ತಾಯಿ ಹಾಲನ್ನು ಮಾತ್ರ ಮಕ್ಕಳಿಗೆ ನೀಡಬೇಕು. ಕನಿಷ್ಠ ಎರಡು ವರ್ಷದವರೆಗೆ ಸ್ತನ್ಯಪಾನ ಮಾಡಿಸಬೇಕು. ತಾಯಿ ಹಾಲಿನಲ್ಲಿ ಎಲ್ಲ ಪೋಷಕಾಂಶಗಳು ಇರುವುದರಿಂದ ಮಗುವಿಗೆ ಬರಬಹುದಾದ ಇರುಳುಗಣ್ಣು, ನ್ಯೂಮೋನಿಯಾ, ಅತಿಸಾರ ತಡೆಗಟ್ಟುತ್ತದೆ. ಸ್ತನ್ಯಪಾನ ಮಗುವಿಗೆ ಮೊದಲ ಲಸಿಕೆ. ಸರಿಯಾದ ಭಂಗಿಯಲ್ಲಿ ಮಗುವಿಗೆ ಹಾಲು ಕುಡಿಸುವುದು, ಹಾಲು ಕುಡಿಸಿದ ನಂತರ ತೇಗಿಸಿ ಮಲಗಿಸುವುದು ಬಹಳ ಮುಖ್ಯ ಎಂದು ತಿಳಿಸಿದರು.
ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಸಲಾಯಿತು. ಪ್ರಸೂತಿ ತಜ್ಞೆ ಡಾ. ಚಂದ್ರಪ್ರಭಾ, ನೇತ್ರ ತಜ್ಞೆ ಡಾ. ಶ್ರೀರಂಜಿನಿ, ರೋಟರಿ ಅಧ್ಯಕ್ಷ ಡಿ.ಸಿ.ದಿವಾಕರ್, ಇನ್ನರ್‌ವೀಲ್ ಅಧ್ಯಕ್ಷೆ ಬಿಂದು ವಿಜಯನ್, ಮಧು ವೆಂಕಟೇಶ್, ರಾಧಿಕಾ, ಡೈಸಿ, ಶುಶ್ರೂಷಕ ಅಧಿಕಾರಿ ಸುನಾ ಮ್ಯಾಥ್ಯು, ಪಿ.ಪಿ.ಬೇಬಿ, ನಾಗಲತಾ, ಗಾಯತ್ರಿ, ಸುಜಾತಾ ಇದ್ದರು.