ಚಿತ್ರದುರ್ಗ: ಅಮೃತಕ್ಕೆ ಸಮನಾದ ತಾಯಿ ಹಾಲು ಶಿಶುವಿನ ಆರೋಗ್ಯಕ್ಕೆ ಸಹಕಾರಿ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಹೇಳಿದರು.
ಆರೋಗ್ಯ ಇಲಾಖೆ ಇಲ್ಲಿನ ಬುದ್ಧ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೊದಲ ಆರು ತಿಂಗಳು ಶಿಶುವಿನ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ದೇಶದಲ್ಲಿ ಒಂದು ಕುಟುಂಬ ಮಕ್ಕಳ ಆರೋಗ್ಯಕ್ಕಾಗಿ ವಾರ್ಷಿಕ 15-25 ಸಾವಿರ ರೂ. ವರೆಗೂ ಖರ್ಚು ಮಾಡುತ್ತದೆ. ಈ ಖರ್ಚನ್ನು ತಪ್ಪಿಸಲು ಮಗು ಜನಿಸಿದ ಒಂದು ಗಂಟೆ ಒಳಗೆ ತಾಯಿ ಹಾಲನ್ನು ಕುಡಿಸಬೇಕು, ಆರು ತಿಂಗಳ ತನಕ ಮಗುವಿಗೆ ಬೇರೆ ಏನನ್ನೂ ನೀಡಬಾರದು. ಮಗುವಿನ ಬೆಳವಣಿಗೆಗೆ ಬೇಕಾದ ಎಲ್ಲ ಅಂಶಗಳು ತಾಯಿ ಹಾಲಿನಲ್ಲಿರುತ್ತವೆ. ಹಾಗಾಗಿ ಆರು ತಿಂಗಳಿಂದ ಎ ರಡು ವರ್ಷಗಳವರೆಗೂ ತಾಯಿ ಹಾಲುಣಿಸಬೇಕು. 2 ವರ್ಷಗಳ ನಂತರ ಕಿಚಡಿ, ರಾಗಿಸರಿ, ಹಣ್ಣು ಮುಂತಾದ ಪೂರಕ ಆಹಾರವನ್ನು ಹಂತ-ಹಂತವಾಗಿ ಕೊಡಬೇಕು ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ಮಾತನಾಡಿ, ನಿಗದಿತ ಅವಧಿವರೆಗೆ ತಾಯಿ ಹಾಲು ನೀಡುವುದರಿಂದ ಶಿಶುವನ್ನು ಹಲವು ಸೋಂಕುಗಳಿಂದ ರಕ್ಷಿಸಬಹುದಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಬಿ.ವಿ. ಗಿರೀಶ್ ಮಾತನಾಡಿ, ಶಿಶು ಜನನದ 48 ಗಂಟೆಗಳ ತನಕ ಸ್ನಾನ ಮಾಡಿಸಬಾರದು. ಮಗುವಿನ ಹೊಕ್ಕಳ ಬಳ್ಳಿಗೆ ಯಾವುದೇ ತರಹ ಔಷಧ ಹಚ್ಚಬಾರದು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ. ಕೃಷ್ಣನಾಯ್ಕ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ಜಿಲ್ಲಾ ಆರೋಗ್ಯ ಉಪ ಶಿಕ್ಷ ಣಾಧಿಕಾರಿ ಗೌರಮ್ಮ, ವೈದ್ಯಾಧಿಕಾರಿ ಡಾ. ಸುರೇಂದ್ರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಜಾನಕಿ, ಕಾರ್ಯಕ್ರಮ ನಿರೂಪಣಾಧಿಕಾರಿ ಮಂಜುನಾಥ ಇದ್ದರು.
ತಾಯಿ ಹಾಲು ಅಮೃತಕ್ಕೆ ಸಮ
ಐಮಂಗಲ
ಹೆರಿಗೆಯಾದ ಒಂದು ಗಂಟೆಯೊಳಗೆ ತಾಯಿ ಹಾಲು ಕೊಡುವುದು ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಮೌಢ್ಯ ಆಚರಣೆಗೆ ಮಗುವಿನ ಆರೋಗ್ಯ ಹಾಳು ಮಾಡಬೇಡಿ ಎಂದು ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಿ ಸಣ್ಣರಂಗಮ್ಮ ಹೇಳಿದರು.
ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಈಚೆಗೆ ಆರೋಗ್ಯ ಇಲಾಖೆ ಆಯೋಜಿಸಿದ್ದ ಸ್ತನ್ಯಪಾನ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಅನೇಕ ರೀತಿಯ ಮೂಢನಂಬಿಕೆಗಳಿವೆ. ನವಜಾತ ಶಿಶುಗಳಿಗೆ ಜನನದ ನಂತರ ಜೇನುತುಪ್ಪ ತಿನ್ನಿಸುವುದು, ತಾಯಿ ಹಾಲನ್ನು ಹುತ್ತಕ್ಕೆ ಹಾಕುವುದು ಇತ್ಯಾದಿಗಳಿವೆ. ಇಂತಹವುಗಳನ್ನು ಬಿಡಬೇಕು. ತಾಯಿ ಹಾಲಿನಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿ ಮೆದುಳು ಚುರುಕಾಗುತ್ತದೆ. ಮೂರು ವರ್ಷದವರೆಗೂ ಹಾಲುಣಿಸುವುದು ಆರೋಗ್ಯಕ್ಕೆ ಒಳಿತು ಎಂದರು.
ಇತ್ತೀಚಿನ ದಿನಗಳಲ್ಲಿ ಗರ್ಭಿಣಿ ಮತ್ತು ಬಾಣಂತಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ರಾಸಾಯನಿಕ ಬಳಸಿ ಬೆಳೆಯುವ ಆಹಾರದಿಂದ ಈ ಸಮಸ್ಯೆ ಎದುರಾಗಿದೆ. ಗರ್ಭಿಣಿಯರು ಪೌಷ್ಠಿಕ ಆಹಾರ ಸೇವಿಸುವುದರಿಂದ ಆರೋಗ್ಯವಂತ ಮಗು ಜನಿಸುತ್ತದೆ. ಯಾವುದೇ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು. ಕಾಲ ಕಾಲಕ್ಕೆ ವೈದ್ಯರಿಂದ ಸೂಕ್ತ ಸಲಹೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವೈದ್ಯಾಧಿಕಾರಿ ಡಾ.ವಿಜಯ್, ಹಿರಿಯೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್, ಆರೋಗ್ಯ ಇಲಾಖೆಯ ಚಂದ್ರಪ್ಪ, ವಿಶಾಲಾಕ್ಷಿ, ರಾಜೇಶ್ವರಿ, ಅಮಿತ್, ರುದ್ರಮುನಿ, ಶಾಂತಕುಮಾರ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿದ್ದರು.