ಹೊಸಕೋಟೆ: ನಗರದ ಕನಕ ಭವನದಲ್ಲಿ ಭಾನುವಾರ ಮುಂಜಾನೆ 6:30ರಿಂದ 7:30ರ ಮುಹೂರ್ತದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ತಡೆದಿದ್ದಾರೆ.
ಶನಿವಾರ ಸಂಜೆ 15 ವರ್ಷದ ಬಾಲಕಿಗೆೆ ಬೆಂಗಳೂರಿನ ಕೋಡುಗೆಹಳ್ಳಿಯ ವರನೊಂದಿಗೆ ಅದ್ದೂರಿಯಾಗಿ ಆರತಕ್ಷತೆ ನಡೆಸಲಾಗಿತ್ತು. ಇನ್ನೇನು ಭಾನುವಾರ ಮುಂಜಾನೆ ತಾಳಿ ಕಟ್ಟಲು ಸಕಲ ಸಿದ್ಧತೆ ಕೂಡ ಪೂರ್ಣಗೊಂಡಿತ್ತು. ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾಲಕ್ಷ್ಮೀ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಶ್ರೀಧರ್ ಹಾಗೂ ಸಹಾಯವಾಣಿ ಜಿಲ್ಲಾ ಸಂಯೋಜಕ ಶ್ರೀನಿವಾಸ್ ಕೂಡಲೇ ಮದುವೆ ನಿಲ್ಲಿಸುವಂತೆ ಆದೇಶ ನೀಡಿದ್ದರು. ಅಲ್ಲದೇ ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೆ ಆಗಮಿಸಿದ ಅಧಿಕಾರಿಗಳ ತಂಡ ಅಪ್ರಾಪ್ತೆಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ತಾತ್ಕಾಲಿಕವಾಗಿ ಆಶ್ರಯ ನೀಡಿದ್ದಾರೆ.
ಘಟನೆ ವಿವರ: ಚಿಕ್ಕಬಳ್ಳಾಪುರ ಜಿಲ್ಲೆಯ ಅಗಲಗುರ್ಕಿ ನಂದಿ ಹೋಬಳಿಯ ಶ್ರೀರಾಮಪುರದ ವಧುವಿಗೆ, ಹುಡುಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಒಳ್ಳೆಯ ಸಂಬಂಧ, ಇದನ್ನು ಬಿಟ್ಟರೆ ಮತ್ತೊಬ್ಬ ವರ ಸಿಗುವುದಿಲ್ಲ ಎಂದು ಒತ್ತಾಯಿಸಿ ಮದುವೆ ತಯಾರಿ ಮಾಡಿದ್ದರು. ವರ ಬೆಂಗಳೂರಿನ ಕೊಡಿಗೆಹಳ್ಳಿಯ ನಿವಾಸಿಯಾಗಿದ್ದು, ಹುಡುಗಿಯ ವಯಸ್ಸಿನ ಬಗ್ಗೆ ವರನ ಕುಟುಂಬದವರಿಗೆ ತಪ್ಪು ಮಾಹಿತಿ ನೀಡಿದ್ದರು ಎನ್ನಲಾಗಿದೆ.