ಸಂತೋಷ ವೈದ್ಯ ಹುಬ್ಬಳ್ಳಿ
ಕಳೆದ ಒಂದೂವರೆ ವರ್ಷದಿಂದ ಹು-ಧಾ ಮಹಾನಗರ ಪಾಲಿಕೆಯ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಖರ್ಚು ಮಾಡಿದ ಹಣ ಮರು ಪಾವತಿಯಾಗಿಲ್ಲ. ಈ ನಡುವೆ ವೈದ್ಯಕೀಯ ವೆಚ್ಚ ಪಾವತಿಗೆ ತಡೆ ಇರುವ ಬಗ್ಗೆ ಪೌರಾಡಳಿತ ನಿರ್ದೇಶನಾಲಯ (ಡಿಎಂಎ)ದಿಂದ ಸ್ಪಷ್ಟವಾದ ಆದೇಶ ಇದೆಯೋ ಅಥವಾ ಇಲ್ಲವೋ ಎಂಬ ಗೊಂದಲ ಮುಂದುವರಿದಿದೆ.
ವೈದ್ಯಕೀಯ ವೆಚ್ಚ ಪಾವತಿಸಿರುವ ಬಗ್ಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಿಟ್ ಆಕ್ಷೇಪಣೆ ಎದುರಿಸಿದೆ ಹಾಗೂ ಅಲ್ಲಿ ಪಾಲಿಕೆ ಸದಸ್ಯರಿಗೆ ಪಾವತಿಸಿರುವ ವೈದ್ಯಕೀಯ ವೆಚ್ಚದ ಮೊತ್ತವನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಂಬಳದಿಂದ ಮುರಿದುಕೊಳ್ಳಲಾಗಿದೆ ಎಂದು ಇಲ್ಲಿಯ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ವೈದ್ಯಕೀಯ ವೆಚ್ಚ ಕೊಡಬಾರದು ಎಂಬುದಕ್ಕೆ ಪೌರಾಡಳಿತ ನಿರ್ದೇಶನಾಲಯದ ಆದೇಶ ಇರುವ ಬಗ್ಗೆ ಸದಸ್ಯರ ಗಮನಕ್ಕೆ ತರುವಲ್ಲಿ ಪಾಲಿಕೆ ವಿಫಲವಾಗಿದೆ.
ಹು-ಧಾ ಮಹಾನಗರ ಪಾಲಿಕೆಯ ಸದಸ್ಯರಾದ ಮಂಜುನಾಥ ಬಡಕುರಿ, ಸುರೇಶ ಬೆದರೆ, ಸೀಮಾ ಮೊಗಲಿಶೆಟ್ಟರ್, ರೂಪಾ ಶೆಟ್ಟಿ ಹಾಗೂ ಉಮಾ ಮುಕುಂದ ಅವರಿಗೆ ವೈದ್ಯಕೀಯ ವೆಚ್ಚದ ಬಿಲ್ ಮೊತ್ತ ಮರು ಪಾವತಿಸುವುದು ಬಾಕಿ ಇದೆ. ಇವರಲ್ಲಿ ಕೆಲ ಸದಸ್ಯರು ವೈದ್ಯಕೀಯ ಚಿಕಿತ್ಸೆಗಾಗಿ 7 ಲಕ್ಷ ರೂ. ಮೇಲ್ಪಟ್ಟು ಹಣ ಖರ್ಚು ಮಾಡಿದ್ದಾರೆ. ಆದರೆ, ಪಾಲಿಕೆ ಪಾವತಿಸುವುದು ಸಿಜಿಎಚ್ಎಸ್ (ಸೆಂಟ್ರಲ್ ಗವರ್ನಮೆಂಟ್ ಹೆಲ್ತ್ ಸ್ಕೀಮ್ ದರಗಳ ಅನ್ವಯ. ಇದು ಮೂಲ ವೆಚ್ಚಗಳಿಗಿಂತ ಬಹಳ ಕಡಿಮೆ ಇರುತ್ತದೆ. ಇಷ್ಟನ್ನು ಪಾವತಿಸುವುದಕ್ಕೂ ಬ್ರೇಕ್ ಬಿದ್ದಿದೆ.
ವೈದ್ಯಕೀಯ ಚಿಕಿತ್ಸೆಗಾಗಿ ಖರ್ಚು ಮಾಡಿದ ವೆಚ್ಚವನ್ನು ಮರು ಪಾವತಿಸುವ ಕುರಿತು ಸದಸ್ಯರು ಅರ್ಜಿ ಸಲ್ಲಿಸುತ್ತಾರೆ. ಖರ್ಚು ಮಾಡಿದ ಮೊತ್ತದ ಕುರಿತು ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಪರಿಶೀಲನೆ ನಡೆಸಿ ಸಿಜಿಎಚ್ಎಸ್ ದರಗಳ ಅನ್ವಯ ನಿರ್ದಿಷ್ಟ ಮೊತ್ತ ಮರು ಪಾವತಿಸುವಂತೆ ಶಿಫಾರಸು ಮಾಡುತ್ತಾರೆ. ಹೀಗೆ ಶಿಫಾರಸು ಮಾಡಿದ ಬಳಿಕ ಪಾಲಿಕೆಯ ಸಾಮಾನ್ಯ ಸಭೆಗೆ ಪ್ರಸ್ತಾವನೆ ಮಂಡಿಸಿ, ಅನುಮೋದನೆ ಪಡೆದು ಸದಸ್ಯರಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಮಾಡಲಾಗುತ್ತದೆ.
ಕಳೆದ ಒಂದೂವರೆ ವರ್ಷದಲ್ಲಿ ಪಾಲಿಕೆಯ ಸಾಮಾನ್ಯ ಸಭೆಯ ಗಮನಕ್ಕೆ ತರಲಾದ ಇಂಥ ಪ್ರಸ್ತಾವನೆಗಳನ್ನು ತಿರಸ್ಕರಿಸುತ್ತ ಬರಲಾಗಿದೆ. ಇಲ್ಲಿಯವರೆಗೂ ಇದ್ದ ವೈದ್ಯಕೀಯ ವೆಚ್ಚದ ಮರು ಪಾವತಿ ಇದೀಗ ಏಕಾಏಕಿ ನಿಲ್ಲಿಸಿದ್ದು ಯಾಕೆ ? ಸಂಸದರು, ಶಾಸಕರಿಗೆ ಇರುವ ಈ ಸೌಲಭ್ಯ ನಮಗ್ಯಾಕೆ ಇಲ್ಲ? ನಾವು ಜನಪ್ರತಿನಿಧಿಗಳಲ್ಲವೇ ? ಎಂಬುದು ಪಾಲಿಕೆ ಸದಸ್ಯರ ಪ್ರಶ್ನೆಯಾಗಿದೆ.
ಇಲ್ಲಿ ವರ್ಷಕ್ಕೆ ಹೆಚ್ಚೆಂದರೆ ಐದಾರು ಸದಸ್ಯರು ಮಾತ್ರ ವೈದ್ಯಕೀಯ ವೆಚ್ಚದ ಕ್ಲೇಮ್ ಮಾಡುತ್ತಾರೆ. ಆದರೆ, ಪ್ರತಿ ತಿಂಗಳು ಪಾಲಿಕೆಯ 2-3 ನೌಕರರು, ಸಿಬ್ಬಂದಿ ವೈದ್ಯಕೀಯ ವೆಚ್ಚವನ್ನು ಪಡೆಯುತ್ತಿರುತ್ತಾರೆ. ಪಾಲಿಕೆಯ ನೌಕರರು ಹಾಗೂ ಸಿಬ್ಬಂದಿಗೆ ಇರುವ ಈ ಸೌಲಭ್ಯ ನಮಗ್ಯಾಕಿಲ್ಲ ಎಂದು ಸದಸ್ಯರೊಬ್ಬರು ಪ್ರಶ್ನಿಸಿದ್ದಾರೆ.
ವೈದ್ಯಕೀಯ ಚಿಕಿತ್ಸೆಗಾಗಿ ಪಾಲಿಕೆ ಸದಸ್ಯರು ಖರ್ಚು ಮಾಡಿದ ಹಣ ಮರು ಪಾವತಿ ಮಾಡುವ ಬಗ್ಗೆ ಪೌರಾಡಳಿತ ನಿರ್ದೇಶನಾಲಯದಿಂದ ತಡೆ ಇದ್ದರೆ, ಅದಕ್ಕೆ ನಮ್ಮ ವಿರೋಧವಿದೆ. ಸಂಸದರು, ಶಾಸಕರು ವೈದ್ಯಕೀಯ ವೆಚ್ಚ ಕ್ಲೇಮ್ ಮಾಡುತ್ತಿರುವಾಗ ನಮಗೆ (ಕಾರ್ಪೆರೇಟರ್) ಯಾಕೆ ಇಲ್ಲ? ಈ ಕುರಿತು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. * ವೀರಣ್ಣ ಸವಡಿ, ಹು-ಧಾ ಮಹಾನಗರ ಪಾಲಿಕೆ ಸಭಾನಾಯಕ
ಶಿವಮೊಗ್ಗ ಹಾಗೂ ದಾವಣಗೆರೆ ಮಹಾನಗರ ಪಾಲಿಕೆಯ ಸದಸ್ಯರು ವೈದ್ಯಕೀಯ ಚಿಕಿತ್ಸಾ ವೆಚ್ಚದ ಬೋಗಸ್ ಬಿಲ್ ಸಲ್ಲಿಸಿ ಕ್ಲೇಮ್ ಪಡೆದಿದ್ದಾರೆ. ಈ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾಗಿ ತನಿಖೆ ನಡೆದಿದೆ. ಆ ಕಾರಣಕ್ಕೆ ಇಲ್ಲಿಯ ಸದಸ್ಯರ ವೈದ್ಯಕೀಯ ವೆಚ್ಚದ ಬಿಲ್ ತಡೆಹಿಡಿಯುವುದು ಸರಿಯಲ್ಲ. ಈ ಕುರಿತು ಪೌರಾಡಳಿತ ನಿರ್ದೇಶನಾಲಯ (ಡಿಎಂಎ)ದಿಂದ ಆದೇಶವೇನಾದರೂ ಇದ್ದಲ್ಲಿ ಕೊಡಿ ಎಂದು ನಾವು ಪಾಲಿಕೆ ಆಯುಕ್ತರನ್ನು ಕೇಳಿದ್ದೇವೆ. * ಈರೇಶ ಅಂಚಟಗೇರಿ, ಮಾಜಿ ಮೇಯರ್
ಶಿವಮೊಗ್ಗ ಮಹಾನಗರ ಪಾಲಿಕೆಯು ಸದಸ್ಯರಿಗೆ ವೈದ್ಯಕೀಯ ವೆಚ್ಚ ಪಾವತಿಸಿರುವ ಬಗ್ಗೆ ಆಡಿಟ್ ಆಕ್ಷೇಪಣೆ ಆಗಿವೆ. ಈ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯದಿಂದ ಸ್ಪಷ್ಟನೆ ಕೇಳಿದ್ದೇವೆ. * ಡಾ. ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತ