ಚಿಮ್ಮಡ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಗುರುವಾರ ಹೋಳಿ ಹುಣ್ಣಿಮೆ ನಿಮಿತ್ತ ಗ್ರಾಮ ಚಾವಡಿ ಹತ್ತಿರದ ಕಾಮ-ರತಿಯರ ಮೂರ್ತಿಗಳನ್ನು ಅಲಕೃಂತ ಮಂಟಪದಲ್ಲಿ ಕೂಡಿಸಿ ಮಂಟಪವನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು.
ಈ ಕಾಮ ರತಿ ದರ್ಶನಕ್ಕೆ ಮಕ್ಕಳಿಂದ ಹಿಡಿದು ಹಿರಿಯರು ಹಲಗೆ ಬಾರಿಸುತ್ತಾ ಬೂಬ್ಬೆ ಹಾಕಿದರು. ಮಾ.14ರಂದು ನಸುಕಿನ ಜಾವ ಕಾಮ ದಹನ ನಡೆಯಲಿದೆ. ಕಾಮನ ಬೆಂಕಿ ಹಚ್ಚಿ ಮನೆಗೆ ಕಾಮನ ಬೆಂಕಿ ಒಯ್ದು ಮನೆಗಳಲ್ಲಿ ಅಡುಗೆ ತಯಾರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.
ದೇಶದಲ್ಲಿಯೇ ಕೆಲವು ಜಿಲ್ಲೆಯಲ್ಲಿ ನಡೆಯುವ ಬಣ್ಣದ ಹಬ್ಬ ತನ್ನದೆ ಆದ ವಿಶಿಷ್ಟತೆ ಪಡೆದುಕೂಂಡಿದೆ. ಆದರೆ ಚಿಮ್ಮಡ ಗ್ರಾಮದಲ್ಲಿ ಮಾತ್ರ ಬಣ್ಣವಿಲ್ಲದೆ ಜಾನಪದ ಗೀತೆ ಹಾಡುತ್ತಾ ಸಂಭ್ರಮಿಸುತ್ತಾರೆ.
ಚಿಮ್ಮಡ ಗ್ರಾಮ ಹೋಳಿ ಆಚರಣೆ ಸಂದರ್ಭದಲ್ಲಿ ಅಹಿತಕರ ಘಟನೆಗೆ ಸಾಕ್ಷಿಯಾಗಿದೆ. ಸುಮಾರು 35 ವರ್ಷಗಳ ಹಿಂದೆ ಕೆಲವು ಕಿಡಿಗೇಡಿಗಳು ಬಸ್ ಸೇರಿ ಹಲವು ವಾಹನಗಳನ್ನು ಜಖಂಗೊಳಿಸಿದರು. ಇದರಿಂದ ಬೇಸತ್ತ ಗ್ರಾಮದ ಹಿರಿಯರು ಮತ್ತು ಗ್ರಾಮಸ್ಥರು ಸೇರಿ ಇನ್ನು ಮುಂದೆ ಬಣ್ಣವನ್ನೇ ನಿಷೇಧಿಸೋಣ ಎಂಬ ನಿರ್ಧಾರಕ್ಕೆ ಬಂದರು. ಅಂದಿನಿಂದ ಗ್ರಾಮದಲ್ಲಿ ಬಣ್ಣದ ಹಬ್ಬಕ್ಕೆ ಬ್ರೇಕ್ ಬಿದ್ದಿದೆ.
ಕಬ್ಬು ಕಡಿಯುವ ಗ್ಯಾಂಗಿನವರು ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ವಿವಿಧ ತರಹದ ವಿನ್ಯಾಸದಿಂದ ಕೂಡಿರುವ ಬಣ್ಣದ ಬಟ್ಟೆ ಧರಿಸಿ ಸಂಭ್ರಮಿಸುತ್ತಾರೆ.