ಸಾಗರ ತಾಲೂಕಿನ ನಾಡಕಲಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲಾಯಿತು. ಕೆ.ಆರ್.ಶ್ರೀಧರ ಭಟ್, ಬಿ.ಕೆ.ರಾಜಶೇಖರ್, ಎಚ್.ಚಂದ್ರಶೇಖರ್, ತಮ್ಮಣ್ಣಪ್ಪ ಇತರರಿದ್ದರು. 
ಜಿಲ್ಲೆ

ಸಂಕ್ರಮಣ ಸ್ಥಿತಿಯಲ್ಲಿ ಅನ್ನದಾತ: ಕಾಗೋಡು ತಿಮ್ಮಪ್ಪ ಕಳವಳ

Shivamogga - Desk - Vinayakumar D B

ಸಾಗರ: ಶ್ರಮ ಸಂಸ್ಕೃತಿಯ ಪ್ರತೀಕ ಮತ್ತು ಮಾನವ ಸಂಪನ್ಮೂಲದ ಬಳಕೆಯ ಕೃಷಿ ಚಟುವಟಿಕೆ ಕ್ಷೀಣಿಸುತ್ತಿದೆ. ನೇಗಿಲು, ನೊಗದ ಜಾಗದಲ್ಲಿ ಯಂತ್ರಗಳು ಬಂದು ಕೂರುತ್ತಿವೆ. ಅನ್ನದಾತ ತೀವ್ರ ಸಂಕ್ರಮಣದ ಸ್ಥಿತಿಯಲ್ಲಿದ್ದಾನೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ನಾಡಕಲಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿ, 1972ರಲ್ಲಿ ಗೇಣಿ ರದ್ದತಿ ಕಾಯ್ದೆ ಜಾರಿಗೆ ಬಂದಿದೆ. 1952ರಲ್ಲಿ ಗೇಣಿ ಪದ್ಧತಿ ವಿರುದ್ಧ ಹೋರಾಟ ಪ್ರಾರಂಭವಾಗಿತ್ತು. 1951ರಿಂದ 1972ರವರೆಗೆ ಅನೇಕರು ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ್ದರು. ಯಾರೂ ಗೇಣಿ ರೈತರ ದನಿಯಾಗಿ ಕೆಲಸ ಮಾಡದೆ ಇರುವುದು ದುರದೃಷ್ಟಕರ ಸಂಗತಿ. ನಾನು 1972ರಲ್ಲಿ ಶಾಸಕನಾಗಿ ಮೊದಲ ಬಾರಿಗೆ ವಿಧಾನಸೌಧ ಪ್ರವೇಶ ಮಾಡಿದಾಗ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ನಾನು ವಿಧಾನಸಭೆ ಪ್ರವೇಶ ಮಾಡಿದ ಮೊದಲ ಸಲವೇ ಗೇಣಿ ರೈತರ ಪರ ದನಿಯಾಗಿ ಕೆಲಸ ಮಾಡಿದ್ದು ನನಗೆ ಸಂತೋಷ ತಂದಿದೆ ಎಂದರು.
ಅಂದು ಭೂಮಿ ಕೆಲವರ ಬಳಿ ಸಂಗ್ರಹವಾಗಿತ್ತು. ಗೇಣಿ ರೈತರಿಗೆ ಭೂಮಿ ಹಕ್ಕು ಕೊಡಿಸುವ ಜತೆಗೆ ಉಳ್ಳವರ ಬಳಿ ಇರುವ ಸಾವಿರಾರು ಎಕರೆ ಭೂಮಿಯನ್ನು ಭೂಹೀನರಿಗೆ ಕೊಡಿಸಬೇಕು ಎನ್ನುವ ಸಂಕಲ್ಪ ಹೊಂದಿದ್ದೆ. ಅದರೆ ಅದು ಸಾಧ್ಯವಾಗಿರಲಿಲ್ಲ, ಬದಲಾವಣೆ ಭಾಷಣದಿಂದ ಸಾಧ್ಯವಿಲ್ಲ. ನಾವು ಭೂಮಿಯನ್ನು ಕೊಟ್ಟಿದ್ದೇವೆ. ಕೊಟ್ಟ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುವ ಮೂಲಕ ರೈತಾಪಿ ಬದುಕು ಗಟ್ಟಿಗೊಳಿಸುವತ್ತ ಗಮನ ಹರಿಸಬೇಕಾಗಿದೆ. ಇಂದಿಗೂ ಭೂಮಿ ಸಮಸ್ಯೆ ಇದೆ. ನಮ್ಮ ಹಕ್ಕುಗಳನ್ನು ದಕ್ಕಿಸಿಕೊಳ್ಳಲು ಹೋರಾಟದ ಮೊರೆ ಹೋಗುವುದು ಅನಿವಾರ್ಯವಾಗಿದೆ. ದೇವರಾಜ ಅರಸು ಪ್ರಶಸ್ತಿ ನನ್ನ ಸಣ್ಣ ಸೇವೆಗೆ ಬಂದಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಕೆ.ಆರ್.ಶ್ರೀಧರ ಭಟ್ ಮಾತನಾಡಿ, ಕಾಗೋಡು ತಿಮ್ಮಪ್ಪ ಅವರು ಮಲೆನಾಡು ಭಾಗದ ರೈತರ ಶ್ರೇಯೋಭಿವೃದ್ಧಿಗೆ ಅನವರತ ಶ್ರಮಿಸಿದ್ದಾರೆ. ಭೂಹೀನರಿಗೆ ಮಾಡಿರುವ ಸೇವೆಗೆ ಅವರಿಗೆ ಯಾವಾಗಲೋ ಪ್ರಶಸ್ತಿ ಬರಬೇಕಾಗಿತ್ತು. ರಾಜ್ಯ ಸರ್ಕಾರ ಸೂಕ್ತ ವ್ಯಕ್ತಿಗೆ ಪ್ರತಿಷ್ಠಿತ ದೇವರಾಜ ಅರಸು ಪ್ರಶಸ್ತಿ ಕೊಟ್ಟಿದ್ದು ಪ್ರಶಸ್ತಿಯ ಮೌಲ್ಯ ಹೆಚ್ಚಿದೆ. ಸಾಗರ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪನವರು ಮಾಡಿದ ಅಭಿವೃದ್ಧಿ ರಾಜ್ಯಕ್ಕೆ ಮಾದರಿ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಸವಿತಾ ನಾಗರಾಜ್, ಪ್ರಮುಖರಾದ ಎಚ್.ಚಂದ್ರಶೇಖರ್, ತಮ್ಮಣ್ಣಪ್ಪ, ಮಂಡಗಳಲೆ ನಾಗರಾಜ್, ಕೆ.ಎಸ್.ವೆಂಕಟೇಶ್, ಉಮೇಶ್, ಬಿ.ಕೆ.ರಾಜಶೇಖರ್, ಸುಶೀಲಮ್ಮ, ಶಾರದಮ್ಮ, ಜಯಶೀಲ, ಮಾಲತೇಶ್, ಕರಡಿಯಪ್ಪ, ಕೆ.ಎನ್.ವೆಂಕಟರಮಣ, ಗೋಪಾಲ ಇತರರಿದ್ದರು.