ವಿಜಯಪುರ: ನಗರ ಹೊರವಲಯದ ಹಿಟ್ನಳ್ಳಿ ಕೃಷಿ ಕೃಷಿ ಮಹಾವಿದ್ಯಾಲಯ ಆವರಣದ ವಿವಿಧ ಪ್ರಯೋಗ ತಾಕುಗಳಿಗೆ ಬ್ರ್ಯಾಜಿಲ್ ದೇಶದ ವಿಜ್ಞಾನಿ ಜೆರಾಲ್ಡಿಯೋ ಪ್ರಾನ್ಸಿಸ್ ಶುಕ್ರವಾರ ಭೇಟಿ ನೀಡಿ ಮಾಹಿತಿ ಪಡೆದರು.
ಕೃಷಿ ವಿಶ್ವವಿದ್ಯಾಲಯ ಆವರಣದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಂಡ ವಿವಿಧ ಪ್ರಯೋಗ ತಾಕುಗಳನ್ನು ಪರಿಶೀಲಿಸಿ ವಿಜ್ಞಾನಿಗಳೊಂದಿಗೆ ಚರ್ಚಿಸಿದರು. ಬಳಿಕ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿರುವ ವಿಜ್ಞಾನಿಗಳೊಂದಿಗೆ ಹಮ್ಮಿಕೊಂಡ ವಿವಿಧ ಪ್ರಾತ್ಯಕ್ಷಿಕೆ, ತರಬೇತಿಗಳು, ಮಣ್ಣು ಮತ್ತು ನೀರು ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗಿರುವ ಸೌಲಭ್ಯಗಳ ಕುರಿತು ಚರ್ಚಿಸಿದರು.
ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಇಲ್ಲಿರುವ ಮಣ್ಣು, ನೀರು, ಹವಾಗುಣ ಬ್ರ್ಯಾಜಿಲ್ ದೇಶದಂತೆಯೇ ಇದೆ. ಈ ಭಾಗದ ವೈವಿದ್ಯಮಯ ಕೃಷಿ ತುಂಬಾ ಹಿಡಿಸಿದೆ. ಇಲ್ಲಿರುವ ಸಂಶೋಧನೆಗಳನ್ನು, ಬೆಳೆಗಳನ್ನು ವಿವಿಧ ಉತ್ಪನ್ನಗಳನ್ನು ಕೃಷಿ ವಿವಿ ಜತೆ ಒಡಂಬಡಿಕೆ ಮಾಡಿಕೊಂಡು ಬ್ರ್ಯಾಜಿಲ್ ದೇಶಕ್ಕೆ ತೆಗೆದುಕೊಂಡು ಅಲ್ಲಿರುವ ತಮ್ಮ ದೇಶದ ನಾಗರಿಕರಿಗೆ ಇಲ್ಲಿನ ಬೆಳೆ ವೈವಿಧ್ಯತೆ ಪರಿಚಯಿಸಲಾಗುವುದು. ಅದೇ ರೀತಿ ಇಲ್ಲಿನ ಶಿಕ್ಷಕರು, ವಿಜ್ಞಾನಿ ಹಾಗೂ ವಿದ್ಯಾರ್ಥಿಗಳನ್ನು ಬ್ರ್ಯಾಜಿಲ್ ದೇಶಕ್ಕೆ ಆಹ್ವಾನಿಸಿ ಅಲ್ಲಿರುವ ತಾಂತ್ರಿಕತೆಗಳನ್ನು ಈ ದೇಶಕ್ಕೆ ಪರಚಯಿಸಿ ದೇಶವು ಸಮೃದ್ಧಿಯಾಗಲು ಪ್ರಯತ್ನಿಸುವುದಾಗಿ ತಿಳಿಸಿದರು.
ಧಾರವಾಡ ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ. ಬಸವರಾಜ ಬಿರಾದಾರ ವಿವಿಧ ಘಟಕಗಳನ್ನು ಪರಿಚಯಿಸಿದರು. ಕೃಷಿ ಮಹಾವಿದ್ಯಾಲಯ ಡೀನ್ ಡಾ.ಐ.ಕೆ. ಕಾಳಪ್ಪನವರ, ಸಹ ಸಂಶೋಧನಾ ನಿರ್ದೇಶಕ ಡಾ. ಶೇಖರಪ್ಪ, ಈಡಿಪಿ ಮುಖ್ಯಸ್ಥ ಡಾ. ಎಸ್.ಬಿ. ಪಾಟೀಲ, ಡಾ. ಮಿಲಿಂದ ಪೊದ್ದಾರ, ಪ್ರಾಧ್ಯಾಪಕ ಡಾ. ಎಸ್.ಎಚ್. ಗೋಟ್ಯಾಳ, ಡಾ. ಎಸ್.ಎಚ್. ಗುತ್ತರಗಿ, ಡಾ. ಎ.ಪಿ. ಬಿರಾದಾರ, ಡಾ. ಎಸ್.ಎಂ. ವಸ್ತ್ರದ, ಡಾ.ಅಶ್ವತ್ಥಾಮ, ಡಾ. ಎಸ್.ಎಸ್. ಕರಬಂಟನಾಳ ಮತ್ತಿತರರಿದ್ದರು.
ಸಹ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ. ಬೆಳ್ಳಿ ನಿರ್ವಹಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಎಸ್. ಬಿ. ಪಾಟೀಲ ಸ್ವಾಗತಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎಸ್.ಎಂ. ವಸ್ತ್ರದ ವಂದಿಸಿದರು. ಡಾ. ಅಶ್ವತ್ಥಾಮ ವಿ.ಎಚ್ ನಿರೂಪಿಸಿದರು.