ಬೆಂಗಳೂರು: ಭಾರತ ಹಾಗೂ ಬ್ರೆಜಿಲ್ ನಡುವೆ ಕೃಷಿ ತಂತ್ರಜ್ಞಾನ ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ನಿವೇದಿ ಸಂಸ್ಥೆ, ಹೆಸರುಘಟ್ಟದ ತನ್ನ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬ್ರೆಜಿಲ್‌ನ ಪ್ರತಿನಿಧಿಗಳು ಭಾಗಿಯಾಗಿದ್ದರು.
ಡಾ. ಕಾರ್ಲೋಸ್ ನಬಿಲ್ ಕೋಬ್ರಿಲ್, ಡಾ.ಹ್ಯಾಮಿಲ್ಟನ್ ಹಂಬರ್ಟೊ ರಾಮೋಸ್, ಡಾ.ಅನಾ ಯುಜೆನಿಯಾ, ಡಾ. ಪ್ರಿಸ್ಸಿಲ್ಲಾ ರೋಚಾ ಸಿಲ್ವಾ ಗುಂಡೆಸ್, ಕೃಷಿ ಕ್ಷೇತ್ರದಲ್ಲಿ ಬ್ರೆಜಿಲ್ ಏನೆಲ್ಲ ತಂತ್ರಜ್ಞಾನ ಅಳವಡಿಸಿಕೊಂಡಿದೆ ಎಂಬುದರ ಬಗ್ಗೆ ವಿಚಾರ ಮಂಡಿಸಿದರು.
ಐಸಿಎಆರ್- ನಿವೇದಿ ನಿರ್ದೇಶಕ ಡಾ.ಬಲದೇವ್ ಆರ್. ಗುಲಾಟಿ ಮಾತನಾಡಿ, ಜೈವಿಕ ತಂತ್ರಜ್ಞಾನ, ಡಿಜಿಟಲ್ ಪರಿಹಾರ ಮೂಲಕ ನಮ್ಮ ಸಂಸ್ಥೆಯು ಜಾನುವಾರು ರಕ್ಷಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು. ಪಶುಸಂಗೋಪನೆ ಮತ್ತು ಜಾನುವಾರು ಉದ್ಯಮಿದಲ್ಲಿನ ಅವಕಾಶದ ಬಗ್ಗೆ ಡಾ.ಸತೀಶ್ ಬಿ. ಶಿವಚಂದ್ರ ಮಾತನಾಡಿದರು. ಡಾ.ಎಂ.ಎಂ. ಚಂದಾ, ಡಾ.ಜಿ.ಬಿ. ಮಂಜುನಾಥ್ ರೆಡ್ಡಿ, ಆರ್ಥಿಕ ಪ್ರಾಮುಖ್ಯತೆ, ಕೃಷಿಗೆ ಸಂಬಂಧಿಸಿದಂತೆ ಭಾರತ ಮತ್ತು ಬ್ರೆಜಿಲ್ ತಂತ್ರಜ್ಞಾನ ಹಂಚಿಕೆ ಅಗತ್ಯತೆ ಬಗ್ಗೆ ವಿಚಾರ ಮಂಡಿಸಿದರು.
ಐಸಿಎಆರ್- ನಿವೇದಿ ಅನ್ವೇಷಿಸಿರುವ ಹಣ್ಣೀನ ಪ್ರಭೇದ, ತೋಟಗಾರಿಕೆ ಉತ್ಪನ್ನಗಳ ಕೇಂದ್ರಕ್ಕೆ ಬ್ರೆಜಿಲ್ ನಿಯೋಗ ಭೇಟಿ ನೀಡಿ ಮಾಹಿತಿ ಪಡೆಯಿತು. ಇದೇ ವೇಳೆ ಭಾರತೀಯ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಲು ಆಸಕ್ತಿವಹಿಸಿತು. ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ವಿನಿಮಯ ಮತ್ತು ತಂತ್ರಜ್ಞಾನ ಮೌಲ್ಯೀಕರಣ ಸೇರಿ ವಿವಿಧ ಯೋಜನೆಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಕುರಿತು 2 ಸಂಸ್ಥೆಗಳು ಆಸಕ್ತಿ ವಹಿಸಿವೆ.