ಯಲ್ಲಾಪುರ: ತಾಲೂಕಿನ ಕಣ್ಣಿಗೇರಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಶಾಲೆಯ ಕಾಂಪೌಂಡ್ ವಿಚಾರ ಪ್ರಶ್ನಿಸಿದ ವ್ಯಕ್ತಿಯ ಹಲ್ಲೆ ನಡೆಸಲಾಗಿದೆ. ಶಾಂತಿಯುತವಾಗಿ ನಡೆಯಬೇಕಿದ್ದ ಗ್ರಾಮ ಸಭೆಯಲ್ಲಿ ಮಾರಾಮಾರಿ ನಡೆದು, ಕೆಲಕಾಲ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಯಿತು.
ಕಣ್ಣಿಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಅನ್ನು ಇಲಾಖೆಗೆ ಮಾಹಿತಿ ನೀಡದೇ ಒಡೆದಿರುವ ಬಗ್ಗೆ ಭಾಸ್ಕರ ಭೀಮ ಮಾಪ್ಸೇಕರ್ ಪ್ರಶ್ನಿಸಿದರು. ಇದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿ ಉತ್ತರಿಸುತ್ತಿರುವ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಗ್ರಾಪಂ ಸದಸ್ಯ ವಾಸುದೇವ ಮಾಪ್ಸೇಕರ್, ಸ್ಥಳೀಯರಾದ ಕಾಮೇಶ್ವರ ಮಾಪ್ಸೇಕರ್, ಸಿದ್ದೇಶ್ವರ ಮಾಪ್ಸೇಕರ್ ಅವರು ಭಾಸ್ಕರ ಅವರ ಮೇಲೆ ಕುರ್ಚಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ.
ಸಭೆಯಲ್ಲಿ ಗದ್ದಲವಾಗುತ್ತಿದ್ದಂತೆ ನೋಡಲ್ ಅಧಿಕಾರಿ ನರೇಶ ಜಿ.ಬಿ. ಹಾಗೂ ಪಿಡಿಒ ಎಚ್.ಸಿ. ವಿರಕ್ತಿಮಠ ಮಧ್ಯಪ್ರವೇಶಿಸಿ ಗಲಾಟೆ ನಿಯಂತ್ರಿಸಿದರು. ನಂತರ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಇಲಾಖೆಗೆ ಮಾಹಿತಿ ನೀಡದೇ ಕಾಂಪೌಂಡ್ ಒಡೆದಿರುವುದು ಸರಿಯಲ್ಲ. ಅದನ್ನು ಸರಿಪಡಿಸಿ ಕ್ರಮ ಕೈಗೊಳ್ಳಬೇಕೆಂದು ಎಸ್ಡಿಎಂಸಿಯವರಿಗೆ ಸೂಚಿಸಿದರು. ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಭಾಸ್ಕರ ಮಾಪ್ಸೇಕರ್ ಯಲ್ಲಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.