ಜಿಲ್ಲೆ

ಧೈರ್ಯವಾಗಿ ಜನಾಂದೋಲನ ನಡೆಸಿ ; ಕರೊನಾ ಸೋಂಕಿತ ಪೊಲೀಸ್ ಸಿಬ್ಬಂದಿಗೆ ಧೈರ್ಯ ತುಂಬಿದ ಹಿರಿಯ ಅಧಿಕಾರಿಗಳು

Tumakuru

ತುಮಕೂರು: ಕರೊನಾ ಸೋಂಕಿತ ಪೊಲೀಸ್ ಸಿಬ್ಬಂದಿಗೆ ಧೈರ್ಯ ತುಂಬಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಮರ್‌ಕುಮಾರ್ ಪಾಂಡೆ ಶುಕ್ರವಾರ ರಾತ್ರಿ ನಗರಕ್ಕೆ ಭೇಟಿ ನೀಡಿ ಜಿಲ್ಲೆಯಲ್ಲಿ ಕರೊನಾ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳು, ಸಿಬ್ಬಂದಿಗೆ ಸೂಚನೆಗಳನ್ನು ನೀಡಿದರು.

ಕರೊನಾ ಸಂಕಷ್ಟದ ಸಮಯಕ್ಕೆ ನಾಗರಿಕರ ಆರೋಗ್ಯ ರಕ್ಷಣೆಗೆ ಶ್ರಮಿಸಿದ ಅಧಿಕಾರಿ, ಸಿಬ್ಬಂದಿಗೆ ಪ್ರಶಂಸ್ಸನಾ ಪತ್ರವನ್ನು ವಿತರಿಸಿದರು.

ರಾಜ್ಯದಲ್ಲಿ ಕರೊನಾ ನಿಯಂತ್ರಿಸಲು ಪೊಲೀಸರ ಪಾತ್ರ ಬಹುಮುಖ್ಯವಾಗಿದ್ದು, ಎಲ್ಲ ಸಿಬ್ಬಂದಿಯೂ ಆರೋಗ್ಯದ ಕಡೆ ವಿಶೇಷ ಗಮನ ನೀಡಬೇಕು, ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದ್ದು, ಎಷ್ಟೊ ಠಾಣೆಗಳು ಸೀಲ್‌ಡೌನ್ ಆಗಿವೆ. ನಾವು ಧೈರ್ಯದಿಂದ ಈ ಜನಾಂದೋಲನದಲ್ಲಿ ಭಾಗಿಯಾಗಬೇಕು ಎಂದು ಎಡಿಜಿಪಿ ಅಮರ್‌ಕುಮಾರ್ ಪಾಂಡೆ ಧೈರ್ಯ ತುಂಬಿದರು.

22 ಪೊಲೀಸರಿಗೆ ಕರೊನಾ ಸೋಂಕು ದೃಢ: ಜಿಲ್ಲೆಯಲ್ಲಿ ಈವರೆಗೂ 22 ಪೊಲೀಸರಿಗೆ ಕರೊನಾ ಸೋಂಕು ದೃಢವಾಗಿದ್ದು, 86 ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಇಬ್ಬರು ಪಿಎಸ್‌ಐ, ಒಬ್ಬ ಎಎಸ್‌ಐ 6 ಎಪಿಸಿ ಹಾಗೂ 14 ಸಿಪಿಸಿ ಸೋಂಕಿಗೆ ಸಿಲುಕಿದ್ದರೂ ಆರೋಗ್ಯ ಸ್ಥಿರವಾಗಿದ್ದು ಶೀಘ್ರದಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಒಂದೆಡೆ ಸಿಬ್ಬಂದಿಗೆ ಕರೊನಾ ಸೋಂಕು ದೃಢವಾಗುತ್ತಿರುವುದು ಹಾಗೂ ಮತ್ತೊಂದೆಡೆ ಸಮಾಜದಲ್ಲಿ ಸೋಂಕು ಹರಡದಂತೆ ಜಾಗ್ರತೆ ವಹಿಸುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಈ ಹಿನ್ನೆಲೆಯಲ್ಲಿ ಪಾಳಿಯಲ್ಲಿ ಎಲ್ಲ ಸಿಬ್ಬಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ಇಷ್ಟು ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದರೂ ಅವರ ಕೋವಿಡ್-19 ಟೆಸ್ಟ್ ರಿಪೋರ್ಟ್ ಕೂಡ ತಡವಾಗುತ್ತಿರುವುದು

ಸಂಕಷ್ಟ ತಂದೊಡ್ಡಿದೆ. ಸಾಕಷ್ಟು ಕಷ್ಟದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಟೆಸ್ಟ್ ರಿಪೋರ್ಟ್ ಶೀಘ್ರವಾಗಿ ಬಂದರೆ ಅನುಕೂಲವಾಗಲಿದೆ ಎಂದರು.55 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಮನೆಯಲ್ಲಿಯೇ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ, ಉತ್ತಮ ಆಹಾರ, ಜೀವನ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿದರು. ಕಳವು ಪ್ರಕರಣದಲ್ಲಿ ಬಂಧಿಯಾದ ಇಬ್ಬರು ಕಳ್ಳರಿಂದ ತುಮಕೂರು ನಗರಠಾಣೆ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ಕರ್ತವ್ಯ ನಿರ್ವಹಿಸುವುದು ಸವಾಲಾಗಿದೆ.

ಕರೊನಾ ಸಂಕಷ್ಟದಲ್ಲಿ ಜನಾಂದೋಲನದಲ್ಲಿ ಪ್ರಮುಖಪಾತ್ರ ನಿರ್ವಹಿಸಬೇಕಾದ ಪೊಲೀಸರು ಸೋಂಕಿನಿಂದ ತಪ್ಪಿಸಿಕೊಳ್ಳುವ ಸವಾಲು ಎದುರಿಸಬೇಕಿದೆ. ಆರೋಗ್ಯ ಕಾಪಾಡಿಕೊಂಡು ಜನರ ಆರೋಗ್ಯಕ್ಕೆ ಶ್ರಮಿಸಬೇಕು. ಅಮರ್‌ಕುಮಾರ್ ಪಾಂಡೆ ಎಡಿಜಿಪಿ