ಜಿಲ್ಲೆ

ಹಿಮ್ಸ್‌ನಲ್ಲಿ ಬ್ರೈನ್ ಹೆಲ್ತ್ ಕ್ಲಿನಿಕ್ ಕಾರ್ಯ ನಿರ್ವಹಣೆ

ಹಾಸನ: ಹಿಮ್ಸ್ ವೈದ್ಯಕೀಯ ವಿಭಾಗದಲ್ಲಿ 13ಡಿ ಬ್ರೈನ್ ಹೆಲ್ತ್ ಕ್ಲಿನಿಕ್ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಕ್ಲಿನಿಕ್‌ನಲ್ಲಿ ದೊರೆಯುವ ಸೌಲಭ್ಯಗಳು ಉಚಿತವಾಗಿವೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಹಾಗೂ ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮದ ಕಾರ್ಯಕ್ರಮಾಧಿಕಾರಿ ಡಾ.ನಾಗೇಶ್ ಆರಾಧ್ಯ ಹೇಳಿದರು.

ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಸನ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹಾಸನ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಆಶ್ರಯದಲ್ಲಿ ಚನ್ನಪಟ್ಟಣದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಸ್ಟ್ರೋಕ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಿ ಬ್ರೈನ್ ಹೆಲ್ತ್ ಕ್ಲಿನಿಕ್ ತಂಡದಲ್ಲಿ ಜಿಲ್ಲಾ ಸಂಯೋಜಕ, ಸ್ಪೀಚ್ ಥೆರಪಿಸ್ಟ್, ಫಿಜಿಯೋ ಥೆರಪಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್, ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸೆಪ್ಟೆಂಬರ್‌ನಲ್ಲಿ ನರ್ಸಿಂಗ್ ಆಫೀಸರ್ ಮತ್ತು ನರರೋಗ ತಜ್ಞರು ಸೇರ್ಪಡೆಯಾಗಿದ್ದಾರೆ ಎಂದರು.

ಜನರಿಗೆ ಅರಿವು ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಈ ವಿಭಾಗದಲ್ಲಿ ಮುಖ್ಯವಾಗಿ ತಲೆನೋವು, ಮೂರ್ಛೆರೋಗ, ಪಾರ್ಶ್ವವಾಯು ಮತ್ತು ಮರೆವಿನ ಕಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದರ ಉಪಯೋಗವನ್ನು ಜಿಲ್ಲೆಯ ಎಲ್ಲ ಜನತೆ ಉಪಯೋಗಿಸಿಕೊಳ್ಳುವಂತೆ ಹೇಳಿದರು.

ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮದ ನರರೋಗ ತಜ್ಞ ಡಾ.ಎ.ವತ್ಸಲಾ ಲಕ್ಷ್ಮೀ ಮಾತನಾಡಿ, ಸ್ಟ್ರೋಕ್ ಬರದಂತೆ ತಡೆಗಟ್ಟಲು 40 ವರ್ಷದ ನಂತರ ನಿಯಮಿತವಾಗಿ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ಸಂಬಂಧಿತ ಕಾಯಿಲೆ ಮತ್ತು ಕೊಲೆಸ್ಟ್ರಾಲ್ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವುದರಿಂದ ಸ್ಟ್ರೋಕ್ ತಡೆಗಟ್ಟಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವಾಮಿ, ವಿವೇಕಾನಂದ ಯೂತ್ ಮೂವ್‌ಮೆಂಟ್ ಅಧ್ಯಕ್ಷ ಡಾ.ಬಿ.ಸುಧೀರ್ ತಮ್ಮ ಸಂಸ್ಥೆಯಿಂದ ಸ್ಟ್ರೋಕ್ ರೋಗಿಗಳಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ರೋಟರಿ ಕ್ಲಬ್ ಆಫ್ ಹಾಸನ ಮಿಡ್ ಟೌನ್ ಮಾಜಿ ಅಧ್ಯಕ್ಷ ಜಿ.ಕೆ.ಲಲಿತ್ ಕುಮಾರ್ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮದ ನರರೋಗ ತಜ್ಞ ಡಾ. ಎ.ವತ್ಸಲಾ ಲಕ್ಷ್ಮೀ ತಪಾಸಣೆ ನಡೆಸಿದರು. ಕೆ.ಕೆ.ಮಾನಸಾ(ಸ್ಪೀಚ್ ಥೆರಪಿಸ್ಟ್) ಸ್ಪೀಚ್ ಥೆರಪಿಯನ್ನು ಮತ್ತು ಐಶ್ವರ್ಯ ಯು.ಶೆಟ್ಟಿ(ಫಿಜಿಯೋ ಥೆರಪಿಸ್ಟ್) ಫಿಜಿಯೋ ಥೆರಪಿ ಮಾಡಿದರು.

ಉಪಕ್ರಮದ ಜಿಲ್ಲಾ ಸಂಯೋಜಕಿ ಲತಾಮಣಿ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಜಿಲ್ಲಾ ಸಂಯೋಜಕ ಯೋಗಿನಾಥ್ ಮತ್ತು ಸಿಬ್ಬಂದಿ ಇದ್ದರು.