ಹರಿಹರಪುರ ಮಠದಲ್ಲಿ ನಡೆಯಲಿರುವ ಬ್ರಹ್ಮೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ರಘುನಾಥ ಶಾಸ್ತ್ರಿ ಬಿಡುಗಡೆಗೊಳಿಸಿದರು. ಕೃಷ್ಣ ಭಟ್, ಶಶಿಶೇಖರ್, ಜೆ.ಎಂ.ಹರ್ಷ ಇದ್ದರು. 
ಜಿಲ್ಲೆ

ಹರಿಹರಪುರದಲ್ಲಿ 19ರಿಂದ ಬ್ರಹ್ಮೋತ್ಸವ

ಎಸ್.ಎನ್.ರವೀಂದ್ರ

ಕೊಪ್ಪ: ಹರಿಹರಪುರ ಮಠದಲ್ಲಿ ಏ.19ರಿಂದ 23ರವರೆಗೆ ಬ್ರಹ್ಮೋತ್ಸವ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರ ಆಪ್ತ ಕಾರ್ಯದರ್ಶಿ ರಘುನಾಥ ಶಾಸ್ತ್ರಿ ಹೇಳಿದರು.

ಮಠದಲ್ಲಿ ಬುಧವಾರ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕಾರ್ಯಕ್ರಮವನ್ನು ಧಾರ್ಮಿಕ ವಿಧಿ ವಿಧಾನಗಳಿಗೆ ಸೀಮಿತಗೊಳಿಸದೆ ಸಾಮಾಜಿಕ ಕಾರ್ಯಕ್ರಮವಾಗಿ ಮಾಡಬೇಕು ಎಂಬುದು ಗುರುಗಳ ಅಪೇಕ್ಷೆ. ಪ್ರತಿದಿನ ಬೆಳಗ್ಗೆ 8 ಗಂಟೆಗೆ ವಿಶೇಷ ಪೂಜೆ, 9ಕ್ಕೆ ಮಾತೆಯರಿಂದ ಕುಂಕುಮಾರ್ಚನೆ, 10.30ಕ್ಕೆ ಧರ್ಮಸಭೆ ನಡೆಯಲಿದೆ. ಸಭೆಯಲ್ಲಿ ವಿವಿಧ ಸಮುದಾಯದ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
5 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ದೂರದ ಊರುಗಳಿಂದ ಬರುವ ಭಕ್ತರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಮಠದ ವ್ಯವಸ್ಥಾಪಕ ಕೃಷ್ಣಮೂರ್ತಿ ಭಟ್ ಮಾತನಾಡಿ, ಇದು ಸಮಾಜದ ಉತ್ಸವವಾಗಬೇಕು. ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಬಾರದು. ಎಲ್ಲರನ್ನೂ ಒಳಗೊಂಡು ಕಾರ್ಯಕ್ರಮ ಮಾಡಬೇಕು ಎಂದು ಸ್ವಾಮೀಜಿ ಸೂಚಿಸಿದ್ದಾರೆ. ಊಟೋಪಚಾರ, ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ಕೊನೆಯ ದಿನ ರಾಜಬೀದಿ ಉತ್ಸವ, ತೆಪ್ಪೋತ್ಸವ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಹರಿಹರಪುರ ಉತ್ಸವ ಆಗಬೇಕೆಂಬುದು ಅವರ ಆಶಯ ಎಂದರು.
18ರಂದು ಸಂಜೆ 4 ಗಂಟೆಗೆ ಮಠದ ಎದುರು ಭಕ್ತರಿಂದ ಹೊರೆಕಾಣಿಕೆ ಸ್ವೀಕರಿಸಲಾಗುತ್ತದೆ. ವಿಶೇಷವಾಗಿ ನಡೆಯುವ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಳ್ಳಬೇಕು ಎಂದು ಹೇಳಿದರು. ಸದ್ಗುರು ಸೇವಾ ಸಮಿತಿ ಕಾರ್ಯದರ್ಶಿ ಕೆರೆಕೊಡಿಗೆ ಶಶಿಶೇಖರ್, ಜೆ.ಎಂ.ಶ್ರೀಹರ್ಷ ಇದ್ದರು.