ಜಿಲ್ಲೆ

ಅಧಿಕಾರಿಗಳ ವಿರುದ್ಧ ಕಾನೂನು ಕ್ರಮವಾಗಲಿ: ಬ್ರಾಹ್ಮಣ ಸಭಾದ ಜಿಲ್ಲಾಧ್ಯಕ್ಷ ಎಚ್.ಎಸ್.ನರಸಿಂಹಮೂರ್ತಿ ಆಗ್ರಹ

ಕೆ.ಎನ್.ರಾಘವೇಂದ್ರ

ಮಂಡ್ಯ: ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ಧರಿಸಿ ಸಿಇಟಿ ಪರೀಕ್ಷೆ ಬರೆಯಲು ಅನುಮತಿ ನೀಡಿದ ಹಾಗೂ ವಿದ್ಯಾರ್ಥಿ ಭವಿಷ್ಯಕ್ಕೆ ಕುತ್ತು ತಂದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬ್ರಾಹ್ಮಣ ಸಭಾದ ಜಿಲ್ಲಾಧ್ಯಕ್ಷ ಪ್ರೊ.ಎಚ್.ಎಸ್.ನರಸಿಂಹಮೂರ್ತಿ ಹೇಳಿದರು.

ಸಮಾಜ ದ್ರೋಹಿ ಮನಸ್ಥಿತಿಗಳ ಅವಿವೇಕಿತನ ಅತಿರೇಕಕ್ಕೆ ಹೋಗುತ್ತಿದೆ. ಜನಿವಾರ ತೆಗೆದು ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಹೇಳಿ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಪರೀಕೆ ವಂಚಿತರನ್ನಾಗಿಸಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಜನಿವಾರ ತೆಗೆದು ಪರೀಕ್ಷೆ ಬರೆಯಬೇಕು ಎಂಬ ನಿಯಮವಿಲ್ಲವಾದರೂ ಅಧಿಕಾರಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ದೃಷ್ಠಿಯಿಂದ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಉದ್ದೇಶ ಪೂರ್ವಕವಾಗಿ ಗುರಿಯಾಗಿಸಿಕೊಂಡು ಈ ರೀತಿಯ ಕುಕೃತ್ಯವೆಸಗಿದ್ದಾರೆ. ಹಿಂದು ಸಂಪ್ರದಾಯದಲ್ಲಿ ಮುತ್ತೈದೆಯರಿಗೆ ಮಾಂಗಲ್ಯದಂತೆ ವಿಪ್ರರಿಗೆ ಜನಿವಾರವೂ ಮುಖ್ಯ ಎಂಬುದನ್ನು ಸರ್ಕಾರ ಗಮನದಲ್ಲಿರಿಸಿಕೊಂಡು, ಅದನ್ನು ತೆಗೆಸಿ ಪರೀಕ್ಷೆ ಬರೆಯಬೇಕು ಎಂಬ ಮನಸ್ಥಿತಿ ತೋರಿದವರ ವಿರುದ್ಧ ಕಾನೂನಾತ್ಮಕ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜನಿವಾರ ಧರಿಸಿ ಸಿಇಟಿ ಪರೀಕ್ಷೆ ಬರೆಯಲು ಅನುಮತಿ ನೀಡಿದ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಹಾಗೂ ಮತ್ತೆ ಈ ರೀತಿಯ ಅಹಿತರ ಘಟನೆ ನಡೆಯದಂತೆ ಕ್ರಮ ವಹಿಸಲು ಒತ್ತಾಯಿಸಿ ಬ್ರಾಹ್ಮಣ ಸಭಾದ ವತಿಯಿಂದ ಜಿಲ್ಲೆಯ ಎಲೂ ತಾಲೂಕಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಸಭಾದ ಕಾರ್ಯದರ್ಶಿ ಗೋಪಾಲಕೃಷ್ಣ ಶಣೈ, ಖಜಾಂಚಿ ಎಸ್.ಶ್ರೀಧರ್, ಎಸ್.ಶಂಕರನಾರಾಯಣಶಾಸ್ತ್ರಿ, ಜಿ.ವಿ.ನಾಗರಾಜ್, ಸತ್ಯನಾರಾಯಣ್, ಪ್ರಭಾಕರ್, ರಾಘು ಇದ್ದರು.