ಬೆಂಗಳೂರು: ಆರ್ಥಿಕ ದುರ್ಬಲರಿಗೆ ಕೇಂದ್ರ ಸರ್ಕಾರ ೋಷಿಸಿರುವ ಶೇ.10 ಮೀಸಲಾತಿಯನ್ನು ಜಾರಿ ಮಾಡಲು ಕೂಡಲೇ ಅಧಿಸೂಚನೆ ಹೊರಡಿಸಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಎಕೆಬಿಎಂಎಸ್ ಹಮ್ಮಿಕೊಂಡಿದ್ದ ಬ್ರಾಹ್ಮಣ ಮಹಾ ಸಮ್ಮೇಳನದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಈ ಒತ್ತಾಯವನ್ನು ಮಾಡಲಾಗಿದೆ. ಬ್ರಾಹ್ಮಣರು ಬುದ್ದಿಜೀವಿಗಳು ಹಾಗೂ ಅಧ್ಯಯನಶೀಲರು. ಆದರೆ ಬ್ರಾಹ್ಮಣರಲ್ಲಿ ಕೂಡಾ ಕೃಷಿ ಮತ್ತು ಪೌರೋಹಿತ್ಯವನ್ನು ಅವಲಂಬಿಸಿರುವ ಕುಟುಂಬಗಳಿದ್ದು, ಬ್ರಾಹ್ಮಣರಲ್ಲಿಯೂ ಬಡವರಿದ್ದಾರೆ. ಅಂತಹ ಆರ್ಥಿಕ ದುರ್ಬಲರಿಗೆ ಕೇಂದ್ರ ಸರ್ಕಾರ ಜಾರಿ ಮಾಡಿರುವ ಶೇ.10 ಮೀಸಲಾತಿಯನ್ನು ಇದೂವರೆಗೆ ರಾಜ್ಯ ಸರ್ಕಾರ ಜಾರಿ ಮಾಡಿಲ್ಲ ಈ ಕೂಡಲೇ ಸರ್ಕಾರ ಅಧಿಸೂಚನೆ ಹೊರಡಿಸಬೇಕೆಂದು ಎಕೆಬಿಎಂಎಸ್ ಒಕ್ಕೊರಲಿನಿಂದ ಸರ್ಕಾರವನ್ನು ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಎಕೆಬಿಎಂಎಸ್ ಅಧ್ಯಕ್ಷ ಅಶೋಕ ಹಾರನಹಳ್ಳಿ, ರಾಜ್ಯದ ನಿರ್ವಸತಿಯುಳ್ಳ ಬಡ ಬ್ರಾಹ್ಮಣರ ಅನುಕೂಲಕ್ಕೆ ಶೇ.10 ಮೀಸಲಾತಿ ಅಗತ್ಯವಿದ್ದು, ಮಹಾಸಭೆ ಕೂಡಾ ಯೋಜನೆಗಳನ್ನು ರೂಪಿಸುತ್ತಿದೆ. ಮೊದಲ ಹಂತವಾಗಿ ಸಮುದಾಯದ ಉದ್ಯಮಿಗಳಾದ ರಘುರಾಮ ಸೋಮಯಾಜಿ ಅವರು ನೀಡುವುದಾಗಿ ಹೇಳಿರುವ 50 ಲಕ್ಷ ಹಾಗೂ ಮಹಾಸಭೆಯಿಂದ 50 ಲಕ್ಷ ಸೇರಿಸಿ 1 ಕೋಟಿ ರೂಪಾಯಿ ನಿಧಿಯಿಂದ ರಾಜ್ಯದ ಮನೆಯಿಲ್ಲದ ಬಡ ಬ್ರಾಹ್ಮಣರಿಗೆ ಮನೆ ನಿರ್ಮಿಸಲು ಒಂದು ಕುಟುಂಬಕ್ಕೆ 5ಲಕ್ಷ ರೂಪಾಯಿ ನೀಡುವುದು, ಎಕೆಬಿಎಂಎಸ್ ಸುವರ್ಣ ಸಂಭ್ರಮದ ಸವಿನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಸುವರ್ಣ ಭವನದಿಂದ ಬರುವ ಆದಾಯದಲ್ಲಿ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದಾಗಿ ಹೇಳಿದರು. ಸರ್ಕಾರ ಬಿಡುಗಡೆ ಮಾಡಲು ಸಿದ್ಧವಾಗಿರುವ ಜಾತಿಗಣತಿ ವರದಿಯಲ್ಲಿ ಕೇವಲ 14 ಲಕ್ಷ ಬ್ರಾಹ್ಮಣರಿದ್ದಾರೆಂಬ ಮಾಹಿತಿ ಇದೆ. ಆದರೆ ಈ ಗಣತಿ ವಸ್ತುನಿಷ್ಠವಾಗಿ ನಡೆದಿಲ್ಲ. ಯಾರ ಮನೆಗೂ ಭೇಟಿ ನೀಡದೆ ತಯಾರಾದ ಗಣತಿಯ ಬದಲಾಗಿ ಹೊಸದಾಗಿ ಗಣತಿ ಮಾಡಿ ಬಿಡುಗಡೆ ಮಾಡಲಿ. ನಮ್ಮ ಸಮುದಾಯದ ಜನ ಎಷ್ಟಿದ್ದಾರೆ ಎಂಬ ಸತ್ಯ ತಿಳಿದುಕೊಳ್ಳುವ ಆಶಯ ಸಮುದಾಯದ್ದು ಎಂದು ಹೇಳಿದಾಗ ಕಿಕ್ಕಿರಿದು ಸೇರಿದ್ದ ಸಭಾಂಗಣದಲ್ಲಿ ಚಪ್ಪಾಳೆ, ಕೂಗಾಟದೊಂದಿಗೆ ಸಭಿಕರು ಸಹಮತ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸರ್ಕಾರದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಮಾತನಾಡಿ, ಶೇ.10 ಮೀಸಲಾತಿಯನ್ನು ಬಹಳಷ್ಟು ರಾಜ್ಯಗಳು ಜಾರಿ ಮಾಡಿಲ್ಲ. ನಮ್ಮ ರಾಜ್ಯದಲ್ಲಿ ಕೂಡಾ ಜಾರಿ ಮಾಡುವುದಕ್ಕೆ ಹಲವು ಸಮಸ್ಯೆಗಳಿವೆ. ಅದನ್ನು ಬಹಿರಂಗವಾಗಿ ಹೇಳುವುದಕ್ಕೆ ಅಸಾಧ್ಯ ಎಂದರು. ಒಂದು ಹಂತದಲ್ಲಿ ಮೀಸಲಾತಿ ವಿಷಯದಲ್ಲಿ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ, ಹಿಂದಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀವು ಯಾಕೆ ಜಾರಿ ಮಾಡಿಸಲಿಲ್ಲ ಎಂದು ಆಯೋಜಕರನ್ನು ಮರುಪ್ರಶ್ನೆ ಮಾಡಿದ ಸಚಿವರು, ಯಾವುದೇ ಸಮುದಾಯ ಸರ್ಕಾರದಿಂದ ಕೆಲಸವನ್ನು ಮಾಡಿಸಿಕೊಳ್ಳಬೇಕೆಂದರೆ ಸಂಖ್ಯಾಬಲ, ಸಂಘಟನೆ, ಸಮಾವೇಶಗಳು ಮುಖ್ಯವಾಗುತ್ತವೆ. ಬ್ರಾಹ್ಮಣರು ರಾಜಕೀಯದಲ್ಲಿ ಬ್ರಾಂಡ್ ಆಗಬಾರದು. ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಹೇಳುವ ನಾಯಕರಿಂದ ಯಾವ ಲಾಭವೂ ಇಲ್ಲ. ಸಮುದಾಯದ ಹಿತದೃಷ್ಟಿಯಿಂದ ನಮ್ಮ ತಂದೆಯ ಕಾಲದಿಂದ ಹಲವು ಕೆಲಸ ಮಾಡಿದ್ದೇವೆ. ದೇಶಪಾಂಡೆಯವರು, ನಾನು ಕೂಡಾ ಈಗಲೂ ಕೆಲಸ ಮಾಡಲು ರೆಡಿ ಇದ್ದೇವೆ. ನಮ್ಮ ಮೇಲೂ ವಿಶ್ವಾಸವಿಡಿ, ನಮ್ಮನ್ನು ದೂರ ಇಡಬೇಡಿ. ಸಮುದಾಯದ ಬೇಡಿಕೆಗಳ ಬಗ್ಗೆ ಒಂದು ಮನವಿ ಪತ್ರವನ್ನು ಸಿದ್ಧಪಡಿಸಿ ನಾವೇ ನಿಮ್ಮನ್ನು ಸಿಎಂ ಬಳಿ ಕರೆದುಕೊಂಡು ಹೋಗಿ ಅದನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ಬ್ರಾಹ್ಮಣರು ಬಹಳ ಪ್ರಾಚೀನ ಕಾಲದಿಂದ ದೇಶದ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಸ್ವಾತಂತ್ರ ಹೋರಾಟದಲ್ಲಿ ಕೂಡ ಬ್ರಾಹ್ಮಣರ ಪಾತ್ರ ಪ್ರಮುಖವಾಗಿದೆ. ಬ್ರಾಹ್ಮಣರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಅಧಿಕಾರ ಇದ್ದಾಗ ಎಲ್ಲ ಸಮಾಜಕ್ಕೆ ಅನುಕೂಲವಾಗುವಂತೆ ಕೆಲಸ ಮಾಡಬೇಕು ಎಂದರು. ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ ಮಾತನಾಡಿ, ವ್ಯಕ್ತಿ ಕೇವಲ ಶಿಕ್ಷಣ ಹೊಂದಿದ್ದರೆ ಸಾಲದು, ಆತನಿಗೆ ಸಂಸ್ಕಾರವೂ ಅಗತ್ಯ ಇದನ್ನು ಜಗತ್ತಿಗೆ ತೋರಿಸಿದ್ದು ಬ್ರಾಹ್ಮಣ ಸಮುದಾಯ. ಸಣ್ಣ ಉದ್ಯೋಗ, ಪೌರೋಹಿತ್ಯ ಮಾಡುವ ಬ್ರಾಹ್ಮಣರು ಆರ್ಥಿಕವಾಗಿ ಬಡವಾಗಿರಬಹುದು ಆದರೆ ಹೃದಯ ಶ್ರೀಮಂತರು ಎಂದು ಪ್ರಶಂಸಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ನಡೆದ ವಿಚಾರ ಗೋಷ್ಠಿಯಲ್ಲಿ ಸನಾತನ ಧರ್ಮಕ್ಕೆ ಆಚಾರ್ಯತ್ರಯರ ಕೊಡುಗೆ ಎಂಬ ವಿಷಯ ಕುರಿತು ಡಾ.ಪಾವಗಡ ಪ್ರಕಾಶರಾವ್, ಡಾ.ಗುರುರಾಜ ಕರ್ಜಗಿ, ಡಾ.ಶೆಲ್ವಪಿಳ್ಳೆ ಅಯ್ಯಂಗಾರ್ ವಿಷಯ ಮಂಡಿಸಿದರು. ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಚಿವ ಬೈರತಿ ಸುರೇಶ್, ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶ್ರೀವತ್ಸ, ಗರುಡಾಚಾರ್ ಸಿ.ಕೆ.ರಾಮಮೂರ್ತಿ, ಮಾಜಿ ಶಾಸಕರಾದ ಯು.ಬಿ.ವೆಂಕಟೇಶ್, ನೆಹರು ಓಲೇಕರ್, ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ, ಹವ್ಯಕ ಮಹಾಸಭಾ ಅಧ್ಯಕ್ಷ ಗಿರಿಧರ ಕಜೆ ಮತ್ತಿತರರಿದ್ದರು. ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ರಾಮಚಂದ್ರಾಪುರ, ಹರಿಹರಪುರ, ಕೂಡ್ಲಿ ಶೃಂಗೇರಿ ಮಠ, ಸೋಸಲೆ ವ್ಯಾಸರಾಜ ಮಠ, ಮತ್ತಿತರ ಮಠಗಳ ಶ್ರೀಗಳು, ಹೊರನಾಡು ಧರ್ಮಾಧಿಕಾರಿ ಭೀಮೇಶ್ವರ ಜೋಶಿ, ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಸಾಮಾನ್ಯವಾಗಿ ತಮ್ಮ ಮಕ್ಕಳಿಗೆ ಅವರ ಬೇಡಿಕೆಯಂತೆ ಪೋಷಕರು ಕಾರನ್ನು ಕೊಡಿಸುತ್ತಾರೆ. ಕಾರಿನ ಜೊತೆಗೆ ಸಂಸ್ಕಾರವನ್ನು ಕೊಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ. ಸಂತಾನ ಹೀನತೆ ಹಾಗೂ ಸಂಸ್ಕಾರ ಹೀನತೆ ಎರಡೂ ಸಮಾಜಕ್ಕೆ ಅಪಾಯ. ಹಿಂದೂ ಸಮಾಜದ ಜನಸಂಖ್ಯೆ ದಿನೇ ದಿನೇ ಕುಸಿಯುತ್ತಿದೆ. ಅದರಲ್ಲೂ ಬ್ರಾಹ್ಮಣರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ. ಇರುವ ಜನತೆ ಸರಿಯಾದ ಸಂಸ್ಕಾರವನ್ನು ಪಡೆಯದಿರುವುದು, ದೇಶ ಬಿಟ್ಟು ಬೇರೆ ದೇಶಗಳಿಗೆ ಹೋಗಿ ನೆಲೆಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಪಕ್ಕದ ಪಾಕಿಸ್ತಾನ, ಬಾಂಗ್ಲಾ ದೇಶಗಳಲ್ಲಿ ಆಗಿರುವ ಹಿಂದುಗಳ ಸ್ಥಿತಿ ಭಾರತದಲ್ಲಿ ಆಗಬಾರದು. ಈ ಬಗ್ಗೆ ಎಚ್ಚರ ವಹಿಸಬೇಕು. ಬ್ರಾಹ್ಮಣರಿಗೆ ಗೌರವ ದೊರೆಯುವ ಸ್ಥಳ ಸ್ವರ್ಗವಾಗುತ್ತದೆ ಎಂಬ ಮಾತಿದ್ದು, ಬ್ರಾಹ್ಮಣರು ಗೌರವಕ್ಕೆ ಭಾಜನರಾಗುವಂತೆ ವೇದಾಧ್ಯಯನ ಮಾಡಬೇಕು ಎಂದು ಸ್ವಾಮೀಜಿ ಹೇಳಿದರು.
ಬದಲಾಗುತ್ತಿರುವ ಸಮಾಜದಲ್ಲಿ ಬ್ರಾಹ್ಮಣರು ಕೇವಲ ಆಧುನಿಕ ಶಿಕ್ಷಣವನ್ನು ಮಾತ್ರ ಕಲಿಯುತ್ತಿದ್ದು, ಜೊತೆಗೆ ಸಾಂಪ್ರದಾಯಿಕ ಶಿಕ್ಷಣವೂ ಕೂಡಾ ಅತ್ಯಗತ್ಯವಾಗಿದೆ ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂ ಸರಸ್ವತಿ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ. ಆಧುನಿಕ ಶಿಕ್ಷಣದಿಂದಾಗಿ ಕೇವಲ ಆಧುನಿಕ ಉದ್ಯೋಗದಲ್ಲಿ ಮಗ್ನರಾಗಿರುವ ಬ್ರಾಹ್ಮಣ ಸಮುದಾಯ ಪಾರಂಪರಿಕ ವೃತ್ತಿಗಳಿಂದಲೂ ದೂರಾಗಿದೆ. ಇದರಿಂದ ಸಮಾಜದಲ್ಲಿ ಬ್ರಾಹ್ಮಣರು ಪಡೆದುಕೊಂಡಿರುವ ಪದನಾಮಕ್ಕೆ ತಕ್ಕ ನ್ಯಾಯವನ್ನು ಒದಗಿಸುತ್ತಿಲ್ಲ. ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕೆಂದು ಶ್ರೀಗಳು ಹೇಳಿದರು.